
ರಾಮನಗರ: ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನು ಶಿಕಾರಿ ಮಾಡಿ, ಒಬ್ಬ ಮುಖಂಡ ಕನಿಷ್ಠ 10 ಮಂದಿಯನ್ನು ಪಕ್ಷಕ್ಕೆ ಕರೆತನ್ನಿ ಎಂದು ಪಕ್ಷದ ಕಾರ್ಯಕರ್ತರಿಗೆ
ಟಾಸ್ಕ್ ನೀಡಿದ್ದಾರೆ.
ನನಗೆ ಚನ್ನಪಟ್ಟಣದಲ್ಲಿ ನಿಲ್ಲಬೇಕೆಂಬ ಆಸೆ ಇದೆ. ಆದರೆ ಪಾರ್ಟಿಯವರು ಬೇಡ ಅಂತಿದ್ದಾರೆ. ನೀನು ಕೆಪಿಸಿಸಿ ಅಧ್ಯಕ್ಷ, ಕನಕಪುರ ಎಂಎಲ್ಎ ಇದ್ದೀಯ. ನೀನು ಮತ್ತೆ ನಿಲ್ಲೋದು ಬೇಡ ಎನ್ನುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಯಾರೇ ಆಗಲಿ, ಡಿಕೆಶಿನೇ ಅಭ್ಯರ್ಥಿ ಎಂದು ಚುನಾವಣೆಯಲ್ಲಿ ಪ್ರಚಾರ ಮಾಡಿ ಎಂದು ಕಾರ್ಯಕರ್ತರಿಗೆ ಡಿಕೆಶಿ ಸಲಹೆ ನೀಡಿದ್ದಾರೆ.








