
ಬೆಂಗಳೂರು: ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಬಗ್ಗೆ ತೀವ್ರ ಚರ್ಚೆ ನಡೆದಿದ್ದು, ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಪೆನಿ ಹಾಗೂ ಔಷಧದ ಗುಣಮಟ್ಟ ಮೊದಲೇ ಸಾಬೀತಾಗಿದ್ದರೂ ಯಾಕೆ ಔಷಧ ಪೂರೈಸಿದ್ದೀರಿ? ಐದು ಬಾಣಂತಿಯರ ಸಾವು ಎಂದರೆ ಸಾಮಾನ್ಯ ಸಂಗತಿಯೇ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಇನ್ನಾದರೂ ಜಾಗರೂಕತೆಯಿಂದ ಇರಿ. ಕೂಡಲೇ ಸಂಬಂಧಪಟ್ಟ ಔಷಧಗಳ ಬಗ್ಗೆ ಗಮನ ನೀಡಿ ಎಂದು ಹೇಳಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಮಕ್ಕಳಿಗೆ ಜನ್ಮ ನೀಡಿದ ನಾಲ್ಕು ಮಂದಿ ಬಾಣಂತಿಯರು ನ.9 ರಿಂದ 11ರ ನಡುವೆ ಮೃತಪಟ್ಟಿದ್ದಾರೆ. ಇವರಿಗೆ ರಿಂಗರ್ ಲ್ಯಾಕ್ಟೇಟ್ ಐಪಿ ದ್ರಾವಣ ನೀಡಲಾಗಿತ್ತು. ಈ ಮೊದಲು ಪಾವಗಡ ತಾಲೂಕಿನಲ್ಲೂ ದ್ರಾವಣದಿಂದಾಗಿ ಸಮಸ್ಯೆ ಕಂಡು ಬಂದ ಕಾರಣಕ್ಕೆ ರಾಜ್ಯ ಸರ್ಕಾರ ದ್ರಾವಣ ಪೂರೈಕೆ ಸಂಸ್ಥೆ ನಿಷೇಧಿಸಿದ ಬಳಿಕ ಕೇಂದ್ರದ ಲ್ಯಾಬ್ ನಿಂದ ಅನುಮತಿ ಪಡೆದು ನ್ಯಾಯಾಲಯದ ಆದೇಶದ ಮೂಲಕ ಮತ್ತೆ ಔಷಧ ವಿತರಣೆಗೆ ಅನುಮತಿ ಪಡೆದಿದ್ದಾರೆ. ಆದರೂ ಅವರು ಪೂರೈಸಿದ್ದ 22 ಬ್ಯಾಚ್ ಗಳನ್ನು ನಾವು ತಿರಸ್ಕರಿಸಿದೆವು. ಜತೆಗೆ ಜಿಲ್ಲೆಗಳಿಗೆ ಪೂರೈಕೆಯಾಗಿದ್ದ ಔಷಧವನ್ನೂ ವಾಪಸು ಪಡೆದಿದ್ದೆವು. ಹೊಸದಾಗಿ ರಿಂಗರ್ ಲ್ಯಾಕ್ಟೇಟ್ ಪೂರೈಸಲಾಗಿತ್ತು. ಆದರೂ ಸಮಸ್ಯೆಯಾಗಿದ್ದು ಪರೀಕ್ಷೆಗೆ ಕಳುಹಿಸಲಾಗಿದೆ. ಕಂಪೆನಿ ವಿರುದ್ಧ ಕ್ರಮಕ್ಕೂ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.



















































































