“ಕಳಚಿತು ಅಚ್ಚ ಕನ್ನಡದ ಒಂದು ಕೊಂಡಿ”
ಪ್ರಜ್ವಲಾ ಶೆಣೈ, ಕಾರ್ಕಳ

……ನಿನ್ನೆಯ ತನಕವೂ ಕೇಳುತ್ತಿದ್ದ ಭಾವಗೀತೆಯೊಂದು ಭಾವ ಕಳೆದು ಮೂಕವಾಗಿದೆ. ಆಕಾಶದಲ್ಲಿ ಮಿಂಚಬೇಕಿದ್ದ ತಾರೆಯೊಂದು ಸದ್ದಿಲ್ಲದೆ ಮರೆಯಾಗಿದೆ. 80 -90 ರ ದಶಕದಲ್ಲಿ ಕಿರುತೆರೆಯ ನಿರೂಪಕಿಯಾಗಿ ಪ್ರಸಿದ್ಧಿ ಹೊಂದಿರುವ ಅಚ್ಚಗನ್ನಡದ ಒಡತಿ ಅಪರ್ಣಾ ವಸ್ತಾರೆ ತನ್ನ ಬಾಳ ನಿರೂಪಣೆ ಮುಗಿಸಿದ್ದಾರೆ. ತನ್ನ ಸ್ಪಷ್ಟ ಭಾಷೆ, ನಿರೂಪಣೆಯ ಶೈಲಿಯಿಂದ ಕನ್ನಡದ ಮನೆಮಗಳಾಗಿ ಜನಪ್ರಸಿದ್ಧಿ ಹೊಂದಿರುವ ಕನ್ನಡತಿ ಇನ್ನಿಲ್ಲ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಸರಳ ಸುಂದರ ಮಾತುಗಳು ಹಾಗೂ ಚಂದದ ನಗುವಿನಿಂದ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದ ಅಪರ್ಣಾ ಇನ್ನು ನೆನಪು ಮಾತ್ರ.
ಕಿರುತೆರೆಯ ಧ್ರುವತಾರೆ…
ಇಡೀ ನಿರೂಪಣಾ ಕ್ಷೇತ್ರಕ್ಕೆ ತನ್ನ ಸುಂದರಭಾಷೆಯ ಸೊಗಡಿನ ಮೂಲಕ ಹೊಸ ಆಯಾಮವನ್ನು ಕೊಟ್ಟವರು ಅಪರ್ಣಾ ವಸ್ತಾರೆಯವರು. ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಅಪರ್ಣಾರವರ ನಿರೂಪಣೆ ಇದ್ದರೆ ಕನ್ನಡಿಗರಿಗೆ ಹಬ್ಬದ ವಾತಾವರಣ.80- 90ರ ದಶಕದಲ್ಲಿ ಬಹುತೇಕ ಎಲ್ಲಾ ಜನಪ್ರಿಯ ಕಾರ್ಯಕ್ರಮಗಳಲ್ಲೂ ತನ್ನ ಸ್ಪಷ್ಟವಾದ ಭಾಷೆ, ಅದಕ್ಕೆ ತಕ್ಕ ಹಾವಭಾವದಿಂದ ಕನ್ನಡ ಪದಗಳನ್ನು ಪೋಣಿಸುತ್ತಿದ್ದ ಅಪರ್ಣಾ ಕನ್ನಡದ ನಂಬರ್ ಒನ್ ನಿರೂಪಕಿಯಾಗಿ ಜನಪ್ರಿಯರಾದವರು. ಚಂದನ ವಾಹಿನಿಯ ಚೆಂದದ ನಿರೂಪಕಿಯಾದರು.ಇವರ ಭಾಷಾ ಪ್ರಬುದ್ಧತೆ ಹಾಗೂ ಸ್ಪಷ್ಟ ನುಡಿಗೆ ತಲೆದೂಗದವರು ಯಾರು ಇಲ್ಲ.
ಬದುಕು ಒಂದು ನಿತ್ಯೋತ್ಸವ..
ನಿರೂಪಣೆ ,ನಟನೆ, ಮನೋರಂಜನಾ ಕ್ಷೇತ್ರಕ್ಕೆ ಸಂಪೂರ್ಣ ಜೀವನವನ್ನು ಮೀಸಲಿಟ್ಟ ಇವರು ತನ್ನ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದು ಬಹಳ ವಿರಳ. 1966 ರಲ್ಲಿ ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ ಅಪರ್ಣಾ ಬಾಲ್ಯದಿಂದಲೂ ಪಟಪಟನೆ ಮಾತನಾಡುವ ಮಾತಿನಮಲ್ಲಿ. ಮುಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಪತಿ ನಾಗರಾಜ್ ವಸ್ತಾರೆಯವರ ಸಂಪೂರ್ಣ ಸಹಕಾರ ಇವರನ್ನು ಚಿತ್ರ ರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿಸಿತು. ಮಕ್ಕಳಿಲ್ಲದ ಇವರಿಗೆ ಪತಿ ನಾಗರಾಜ್ ಅವರೇ ಪ್ರಪಂಚವಾಗಿದ್ದರು.ತನ್ನೆಲ್ಲಾ ನೋವುಗಳನ್ನು ನುಂಗಿ, ನಗುವ ಚೆಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಹೆಜ್ಜೆ ಗುರುತನ್ನು ಉಳಿಸಿಕೊಂಡಿರುವ ಅಪರ್ಣಾ ಅವರು ಅಪರೂಪದ ತಾರೆ.ಜೀವನವೊಂದು ನಿತ್ಯೋತ್ಸವವೆಂದು ಹೇಳುತ್ತಾ ದಿನವೂ ನಗು ನಗುತ್ತಾ,ನಗಿಸುತ್ತಾ ಬಾಳಿದ ಇವರ ಜೀವನ ಪ್ರೀತಿ ಎಲ್ಲರಿಗೂ ಸ್ಫೂರ್ತಿ.
ಚಿತ್ರರಂಗದ ಬಹುಮುಖ ತಾರೆ
ಅಪರ್ಣಾ ರವರ ಕನ್ನಡ ಪ್ರೀತಿ ಕೇವಲ ನಿರೂಪಣೆಗಷ್ಟೇ ಸೀಮಿತವಾಗಿರಲಿಲ್ಲ ಸಿನೆಮಾ, ಧಾರಾವಾಹಿ, ನಾಟಕ ಅಭಿನಯಗಳಲ್ಲೂ ಎತ್ತಿದ ಕೈ. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಮಸಣದ ಹೂ ಮೂಲಕ ಬೆಳ್ಳಿತೆರೆಗೆ ಬಣ್ಣ ಹಚ್ಚಿದರು. ಇದು ಇವರ ಮೊದಲ ಚಲನಚಿತ್ರವಾಗಿದ್ದು ಈ ಚಿತ್ರದಲ್ಲಿ ಪಾರ್ವತಿ ಪಾತ್ರದ ಮೂಲಕ ಗಮನ ಸೆಳೆದರು. ನಂತರ ಲೆಕ್ಕವಿಲ್ಲದಷ್ಟು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರು. ಸಾಹಸ ವೀರ, ಒಲವಿನ ಆಸರೆ, ಸಂಗ್ರಾಮ, ನಮ್ಮೂರ ರಾಜ,ಇನ್ಸ್ಪೆಕ್ಟರ್ ವಿಕ್ರಂ, ಒಂದಾಗಿ ಬಾಳು, ಒಂಟಿ ಸಲಗ, ಚಕ್ರವರ್ತಿ ಇನ್ನಿತರ ಸಿನೆಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಇತ್ತೀಚೆಗೆ ಬಿಡುಗಡೆಗೊಂಡ ಗ್ರೇಟ್ ಗೇಮ್ಸ್ ಇವರು ಅಭಿನಯಿಸಿದ ಕೊನೆಯ ಚಿತ್ರವಾಗಿದೆ.ಬೆಳ್ಳಿತೆರೆ ಅಷ್ಟೇ ಅಲ್ಲದೆ ಕಿರುತೆರೆಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡರು. 2003 ರಲ್ಲಿ ಮೂಡಲ ಮನೆ ಧಾರಾವಾಹಿಯಲ್ಲಿ ಮನೆ ಮಗಳಾಗಿ ಜನಪ್ರಿಯರಾದರು. ಟಿ.ಎನ್.ಸೀತಾರಾಮ್ ಖ್ಯಾತಿಯ ಮುಕ್ತ ಮುಕ್ತ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿದರು. 2013ರಲ್ಲಿ ಬಿಗ್ ಬಾಸ್ ಮೊದಲ ಸೀಸನ್ ನಲ್ಲಿ ಮಿಂಚಿ ಜನತೆಗೆ ಇನ್ನಷ್ಟು ಹತ್ತಿರವಾದರು. 2014ರಲ್ಲಿ ಆರಂಭವಾದ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ಸೂಚನೆಗೆ ಧ್ವನಿ ನೀಡಿದರು. ನಟಿ ನಿರೂಪಕಿ ಅಲ್ಲದೆ ರೇಡಿಯೋ ಜಾಕಿಯಾಗಿಯೂ ಇವರ ಸೇವೆ ಗಣನೀಯ. ಮಜಾ ಟಾಕೀಸ್ ಶೋನಲ್ಲಿ ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ್ದರು.
ಬದುಕು ನುಂಗಿದ ಕ್ಯಾನ್ಸರ್
ಇತ್ತೀಚಿನ ದಿನಗಳಲ್ಲಿ ಕಿರಿಯರು,ಹಿರಿಯರು ಎನ್ನುವ ಭೇದ ಭಾವ ವಿಲ್ಲದೇ ಎಲ್ಲರನ್ನೂ ಕಾಡುವ ಮಹಾಮಾರಿ ಕ್ಯಾನ್ಸರ್.ದೇಹವೇ ದೇಹವನ್ನು ನುಂಗಿ ಬಾಧಿಸುವ ವ್ಯಾಧಿ.ನಮ್ಮೊಳಗೆ ನಾವೇ ಹೋರಾಡುವ ಸೋಲು ಗೆಲುವಿನ ಹಾವು ಏಣಿ ಆಟ.ನಿನ್ನೆ ಮೊನ್ನೆಯವರೆಗೆ ಲವಲವಿಕೆಯಿಂದ ಇರುವ ವ್ಯಕ್ತಿಗಳು ಇದ್ದಕ್ಕಿದ್ದಂತೆ ಇನ್ನು ಹೆಚ್ಚು ಕಾಲ ಬದುಕಲಾರರು ಎಂಬ ಸಂಗತಿ ಕೇಳಿದರೆ ಎಂತಹ ಕಲ್ಲು ಹೃದಯವಾದರೂ ಕರಗದೆ ಇರಲಾರದು.ಕಳೆದ ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಎಂಬ ಮಹಾವ್ಯಾಧಿ ಸದ್ದಿಲ್ಲದೆ ಅಪರ್ಣಾ ರವರ ಕಂಠ ಕಸಿದು ಕೊಂಡಿತು.4 ನೇ ಹಂತದ
ಶ್ವಾಸಕೋಶದ ಕ್ಯಾನ್ಸರ್ ನಿಂದ ನರಕ ಯಾತನೆ ಅನುಭವಿಸಿದ ಇವರು ಕೊನೆಯವರೆಗೂ ಹೋರಾಡಿ ತನ್ನ 57 ನೇ ವಯಸ್ಸಿನಲ್ಲಿ ಬಾಳ ಪಯಣವನ್ನು ಮುಗಿಸಿದರು.
ಉಸಿರು ನಿಲ್ಲಿಸಿದ ಕನ್ನಡದ ಕಂಠ
ಅಪರ್ಣಾ ಅವರ ಧ್ವನಿಯೇ ಒಂದು ಸ್ಫೂರ್ತಿಯ ಕಿಡಿ . ಅವರ ಮಾತೇ ಒಂದು ಆಕರ್ಷಣೆ. ಕನ್ನಡಿಗರನ್ನು ತನ್ನೆಡೆಗೆ ಸೆಳೆಯುವ ಸೂಜಿಗಲ್ಲು.ನಿರೂಪಣೆಗೆ ದಾಖಲೆ ಬರೆದಿದ್ದ ಕನ್ನಡದ ಕಂಚಿನ ಕಂಠ,ತನ್ನ ಸುಮಧುರ ಮಾತುಗಳಿಂದ ಕನ್ನಡದ ಮನಸ್ಸುಗಳನ್ನು ಆಕರ್ಷಿಸಿದ ಧ್ವನಿ ಇಂದು ಇಲ್ಲವಾಗಿದೆ.ಆದರೆ ಕನ್ನಡ ಇರುವವರೆಗೂ,ಕನ್ನಡದ ನಿರೂಪಣೆ ಇರುವವರೆಗೂ ಕರ್ನಾಟಕದಲ್ಲಿ ಕನ್ನಡಿಗರ ಮನಸ್ಸಿನಲ್ಲಿ ಕನ್ನಡದ ಕಣ್ಮಣಿಯಾಗಿ ಸದಾ ಅಮರ,ಅಜರಾಮರವಾಗಿರುವರು. ಮರೆಯಾದ ಕನ್ನಡ ತಾರೆಗೆ ಭಾವಪೂರ್ಣ ಅಶ್ರುತರ್ಪಣ….






