
ದಾವಣಗೆರೆ: ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿಯ ಹತ್ಯೆ ಸೇರಿದಂತೆ ನಿರಂತರ ಹಿಂಸೆ ನಡೆಯುತ್ತಿದ್ದು, ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಮೌನ ವಹಿಸಿರುವುದು ಖಂಡನೀಯ. ವ್ಯಾಪಾರ ಮುಂದುವರಿಸುತ್ತಿರುವುದು ಸರಿಯಿಲ್ಲ. ಬಾಂಗ್ಲಾದೇಶದ ಹಿಂದೂಗಳ ಪರ ಧ್ವನಿ ಎತ್ತುತ್ತಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು ಹಿಂದೂಗಳ ರಕ್ಷಣೆಗಾಗಿ ಅಧಿಕಾರಕ್ಕೆ ಬಂದ ಸರ್ಕಾರ ಅದನ್ನು ಮಾಡದಿದ್ದರೆ ಅಧಿಕಾರದಲ್ಲಿರುವುದಕ್ಕೆ ಅರ್ಥವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ 15–20 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆಂದು ಗೃಹ ಇಲಾಖೆ ಹೇಳಿದ್ದರೂ ಮತ್ತೆ ಸರ್ವೇ ಮಾತು ರಾಜಕೀಯ ಓಲೈಕೆಯಾಗಿದೆ. ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯ. ವಂದೇ ಮಾತರಂ ಗೀತೆಯು ಭಾರತಾಂಬೆಯ ಆರಾಧನೆ ಹಾಗೂ ತ್ಯಾಗದ ಗೀತೆ. ಮುಸ್ಲಿಂ ತುಷ್ಟೀಕರಣದಿಂದಲೇ ಇದಕ್ಕೆ ವಿರೋಧ ಉಂಟಾಗಿದೆ. ಜನಗಣಮನ ಮತ್ತು ವಂದೇ ಮಾತರಂ ಎರಡಕ್ಕೂ ಸಮಾನ ಸ್ಥಾನವಿದೆ ಎಂದು ಹೇಳಿದರು.



















