
ವಿಧಾನಸಭೆ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿ ಬಡವರ ಹಸಿವು ನೀಗಿಸಿ, ಗೌರವಯುತ ಬದುಕಿಗೆ ದಾರಿ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಾಲಿನ ‘ಶ್ರೀರಾಮಚಂದ್ರ’ ಎಂದು ಪ್ರಶಂಸಿಸಿದರು.
ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಹೆಸರನ್ನು ಬದಲಿಸಿದ್ದು ರಾಜಕೀಯ ಉದ್ದೇಶದಿಂದ ಎಂದು ಹೇಳಿರುವ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದರೂ, ಚುನಾವಣೆಯಲ್ಲಿ ಶ್ರೀರಾಮಚಂದ್ರ ಇಂಡಿಯಾ ಕೂಟದತ್ತ ಒಲಿದಿದ್ದಾರೆ ಎಂದು ವ್ಯಂಗ್ಯವಾಡಿದರು.
ಮನರೇಗಾ ಯೋಜನೆಯಲ್ಲಿ ಕೇಂದ್ರ–ರಾಜ್ಯ ಅನುದಾನ ಅನುಪಾತವನ್ನು 90:10ರಿಂದ 60:40ಕ್ಕೆ ಇಳಿಸಿರುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದು, ಅನ್ನಭಾಗ್ಯ ಯೋಜನೆಯ ಮೂಲಕ ಹಸಿದವರಿಗೆ ಆಹಾರ ಒದಗಿಸುವ ಶ್ರೇಷ್ಠ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.



















