
ಬಂಟರ ಸಂಘ ಮುಂಬೈ ಇದರ 2024-2025 ನೇ ಸಾಲಿನ ಪ್ರತಿಷ್ಠಿತ ವೈ. ಜಿ. ಶೆಟ್ಟಿ ಸಂಸ್ಮರಣ ಪ್ರಶಸ್ತಿಗೆ ಮುಂಬಯಿಯ ಯುವ ಪತ್ರಕರ್ತ, ಲೇಖಕ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರು ಆಯ್ಕೆಯಾಗಿದ್ದಾರೆ.
ಕಳೆದ ಒಂದೂವರೆ ದಶಕಗಳಿಂದ ಉದಯವಾಣಿ ಮುಂಬೈ ಆವೃತ್ತಿಯಲ್ಲಿ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅವರ ಆರು ಮಹತ್ವದ ಕೃತಿಗಳು ಬೆಳಕು ಕಂಡಿವೆ.
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಎಂಎ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್ ಮತ್ತು ಶ್ರೀ ವರದರಾಜ ಆದ್ಯ ಚಿನ್ನದ ಪದಕ, ಮುಂಬೈ ವಿಶ್ವವಿದ್ಯಾಲಯದಿಂದ
ಎಂ.ಫಿಲ್ ಮತ್ತು ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಅವರ ಪಿಎಚ್ಡಿ ಸಂಶೋಧನ ಕೃತಿ “ಮುಂಬೈ ಕನ್ನಡ ಪತ್ರಿಕೋದ್ಯಮ” ಕೃತಿ ಬೆಳಕು ಕಂಡು ನಾಡಿನ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಡಾ. ದಿನೇಶ್ ಶೆಟ್ಟಿ ರೆಂಜಾಳ ಪತ್ರಿಕಾ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬಂಟರ ಸಂಘ ಮುಂಬೈ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 7 ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.



















