
ಉತ್ತರ ಪ್ರದೇಶದಲ್ಲಿನ ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದಲ್ಲಿ ಪ್ರಿಯಕರನೊಂದಿಗೆ ಜಗಳವಾಡಿದ ಮಹಿಳೆಯೊಬ್ಬರು, ನಾನು ರೈಲಿನಡಿ ಬಿದ್ದು ಸಾಯುತ್ತೇನೆ ಎಂದು ಪ್ರಿಯಕರನನ್ನು ಹೆದರಿಸಲು ಹೋಗಿ, ದುರಾದೃಷ್ಟವಶಾತ್ ರೈಲಿನಡಿ ಸಿಲುಕಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ.ಸಾವನ್ನಪ್ಪಿದ ಮಹಿಳೆಯನ್ನು ಲೋಹಾ ಮಂಡಿಯ ಭಾರತಿ ಧರ್ಮೇಂದ್ರ ಎಂದು ಗುರುತಿಸಲಾಗಿದ್ದು ಭಾರತಿ ಅವರಿಗೆ ಪೂನಂ ಮತ್ತು ಕೃಷ್ಣ ಎಂಬ ಇಬ್ಬರು ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ಆಕೆಯ ಪತಿ ಧರ್ಮೇಂದ ಮೃತಪಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಭಾರತಿ ತನ್ನ ಪ್ರೇಮಿ ಕಿಶೋರ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಕುಡಿತದ ವಿಷಯದಲ್ಲಿ ಇಬ್ಬರ ನಡುವೆ ಜಗಳ ಏರ್ಪಟ್ಟಿದ್ದು, ಆಕೆ ರೈಲ್ವೆ ನಿಲ್ದಾಣದ ಬಳಿ ಬಂದು ತಾನು ಸಾಯುವುದಾಗಿ ಪ್ರಿಯಕರನನ್ನು ಹೆದರಿಸುತ್ತಾರೆ. ನಂತರ ರೈಲ್ವೆ ಹಳಿಯ ಮೇಲೆ ಜಿಗಿದಿದ್ದಾರೆ.
ಅಷ್ಟರಲ್ಲಿ ವೇಗವಾಗಿ ಬಂದ ಕೇರಳ ಎಕ್ಸ್‌ಪ್ರೆಸ್ ರೈಲು ಆಕೆಗೆ ಡಿಕ್ಕಿ ಹೊಡೆದಿದೆ, ಈ ಅಪಘಾತ ಸಂಭವಿಸುತ್ತಿದ್ದಂತೆ ಪ್ರಿಯಕರ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ದೃಶ್ಯಾವಳಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ರೈಲಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಭಾರತಿ ಅವರನ್ನು ಕೂಡಲೇ ಸರೋಜಿನಿ ನಾಯ್ಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.






























































































































