ಕಾರ್ಕಳದ ಅಜೆಕಾರಿನ ಮರ್ಣೆ ಗ್ರಾಮದಲ್ಲಿ ಘಟನೆ…

ಕಾರ್ಕಳ: ಇಲ್ಲಿನ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಕರೆ ತಂದ ರಾತ್ರಿಯೇ ಮೃತಪಟ್ಟ ಘಟನೆ ನಡೆದಿದೆ.
ಈ ಪ್ರಕರಣದ ತನಿಖೆ ನಡೆಸುವಂತೆ ಮೃತರ ತಂದೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಇದೀಗ ಈ ಪ್ರಕರಣಕ್ಕೆ ಸ್ಪೋಟಕ ತಿರುವ ಲಭಿಸಿದ್ದು ಅದೇನೆಂದರೆ ಪತ್ನಿಯೇ ವಿಷ ಉಣಿಸಿ ಪತಿಯನ್ನು ಕೊಲೆ ಮಾಡಿದ್ದಾರೆ ಎಂಬ ವಿಚಾರ ಬಯಲಾಗಿದೆ.
ಪತ್ನಿ ಪ್ರತಿಮಾ(36) ತನ್ನ ಪತಿ ಬಾಲಕೃಷ್ಣ ಪೂಜಾರಿ ಅವರಿಗೆ ತನ್ನ ಪ್ರಿಯಕರ ದಿಲೀಪ್(29) ಎಂಬವನ ಜೊತೆ ಸೇರಿ ವಿಷ ಹಾಕಿ ಕೊಲೆ ಮಾಡಿದ್ದೇನೆ ಎಂದು ತಪ್ಪು ಒಪ್ಪಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿ ಅಜೆಕಾರು ಪೊಲೀಸರು ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನದ ದಿಲೀಪ್ ಎಂಬಾತರನ್ನು ಬಂಧಿಸಿ ಅಪರಾಧ ಕ್ರಮಾಂಕ 36/2024 ಕಲಂ: 61(1)(a), 103, 3(5) BNS ರಂತೆ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕಳೆದ 25 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕೃಷ್ಣ ಅವರನ್ನು ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ, ಮಂಗಳೂರು, ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಅ.19 ರಂದು ಶನಿವಾರ ರಾತ್ರಿ ಮನೆಗೆ ಕರೆತರಲಾಗಿತ್ತು.
ಮರುದಿನ ಅ.20 ರಂದು ಬೆಳಗ್ಗಿನ ಜಾವ 3.30 ರ ಹೊತ್ತಿಗೆ ಬಾಲಕೃಷ್ಣ ಅವರು ಮೃತಪಟ್ಟಿದ್ದಾರೆ. ದಿಢೀರ್ ಕಾಣಿಸಿಕೊಂಡ ಅನಾರೋಗ್ಯದಿಂದ ಬಾಲಕೃಷ್ಣ ಅವರು ಮೃತಪಟಿದ್ದರಿಂದ ಪ್ರತಿಮಾಳ ಅಣ್ಣ ಪದೇ ಪದೇ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಪ್ರತಿಮ ಮತ್ತು ದಿಲೀಪನ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಯೋಚಿಸಿದ್ದರು. ಯೋಜನೆಯಂತೆ ದಿಲೀಪನು ಯಾವುದೋ ವಿಷ ಪದಾರ್ಥ ತಂದು, ಅದನ್ನು ಊಟದಲ್ಲಿ ಬೆರೆಸಿ ಕೊಟ್ಟರೆ ನಿಧಾನವಾಗಿ ಸಾಯುತ್ತಾನೆ ಎಂದು ಹೇಳಿ ಕೊಟ್ಟಿದ್ದ. ಅದರಂತೆ ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿದ್ದೇನೆ. ನಂತರ ಬಾಲಕೃಷ್ಣ ಅವರಿಗೆ ಅಸೌಖ್ಯ ಉಂಟಾಗಿದ್ದು, ನಾನು ಹೇಳಿದಂತೆ ಅ.20 ರಂದು ಬೆಳಗಿನ ಜಾವ 01:30 ಗಂಟೆಗೆ ದಿಲೀಪನು ನಮ್ಮ ಮನೆಗೆ ಬಂದಿದ್ದು, ನಾವಿಬ್ಬರು ಸೇರಿ ಬೆಡ್ಶೀಟ್ ಅನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿರುತ್ತೇವೆ ಎಂದು ಪ್ರತಿಮಾ ಒಪ್ಪಿಕೊಂಡಿರುವುದಾಗಿ ಬಾಲಕೃಷ್ಣ ಅವರ ತಮ್ಮ ರಾಮಕೃಷ್ಣ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿಮಾಳಿಗೆ ಇನ್ಸ್ಟಾಗ್ರಾಮ್ ಮೂಲಕ ಕಾರ್ಕಳದ ಹೋಟೆಲ್ ಹಾಗೂ ಲಾಡ್ಜಿಂಗ್ ಮಾಲಕನ ಪುತ್ರ ದಿಲೀಪ್ ಹೆಗ್ಡೆ ಎಂಬಾತನ ಸ್ನೇಹವಾಗಿದ್ದು ಬಳಿಕ ಈ ಪರಿಚಯ ತೀರಾ ಸಲುಗೆಯ ಮಟ್ಟಕ್ಕೆ ಬೆಳೆದು ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೆ ಕಾರಣವಾಗಿತ್ತು. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಬಳಿಕ ಪೊಲೀಸರು ಇಬ್ಬರನ್ನು ಕರೆದು ಮುಚ್ಚಳಿಕೆ ಬರೆಯಿಸಿ ಎನ್ ಸಿಆರ್ ದಾಖಲಿಸಿದ್ದರು ಎಂದು ಪ್ರತಿಮಾ ಅವರ ಅಣ್ಣ ಸಂದೀಪ್ ಅವರು ವಿವರಿಸಿದ್ದಾರೆ.






