
ಗದಗ : ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವ ವೇಳೆ ಪತ್ತೆಯಾದ ಅಪಾರ ಮೌಲ್ಯದ ಚಿನ್ನದ ನಿಧಿಯನ್ನು ಯಾವುದೇ ಆಸೆಯಿಲ್ಲದೆ ಸರ್ಕಾರಕ್ಕೆ ಹಸ್ತಾಂತರಿಸಿ ರಾಷ್ಟ್ರದ ಗಮನ ಸೆಳೆದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರ ಬಹುಮಾನ ಘೋಷಿಸಿದ್ದರೂ, ನಿರೀಕ್ಷೆಯಂತೆ ಶಾಶ್ವತ ಸರ್ಕಾರಿ ಉದ್ಯೋಗ ದೊರಕದ ಕಾರಣ ಕುಟುಂಬದಲ್ಲಿ ಅಸಮಾಧಾನ ಉಂಟಾಗಿದೆ.
77ನೇ ಗಣರಾಜ್ಯೋತ್ಸವದ ಅಂಗವಾಗಿ ಗದಗ ಜಿಲ್ಲಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಕೊಡುಗೆಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಕಸ್ತೂರೆವ್ವ ಅವರ ಅಣ್ಣ ಬಾಗಲಿಗುಡದಪ್ಪ ಹಾಗೂ ಕುಟುಂಬಸ್ಥರು, ಜಿಲ್ಲಾಡಳಿತವು ಬದಲಿ ನಿವೇಶನ, ಮನೆ ನಿರ್ಮಾಣಕ್ಕೆ ಹಣ ಹಾಗೂ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿದ್ದರೂ, ಇದೀಗ ಕೇವಲ ಗುತ್ತಿಗೆ ಆಧಾರದ ಉದ್ಯೋಗ ನೀಡಿರುವುದು ಬೇಸರ ತಂದಿದೆ. 9 ತಿಂಗಳು ಅಥವಾ ಒಂದು ವರ್ಷದೊಳಗೆ ಕೆಲಸ ಕೈ ತಪ್ಪುವ ಸಾಧ್ಯತೆ ಇದ್ದು, ಮನೆ ಕಟ್ಟಲು ನೀಡಿರುವ 5 ಲಕ್ಷ ರೂ. ಇಂದಿನ ಪರಿಸ್ಥಿತಿಯಲ್ಲಿ ಸಾಕಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು, ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕೆ ಸಚಿವರ ವಿವೇಚನಾ ನಿಧಿಯಿಂದ 5 ಲಕ್ಷ ರೂ. ಧನಸಹಾಯ ಹಾಗೂ ಕಸ್ತೂರೆವ್ವ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿ ಹೊರಗುತ್ತಿಗೆ ಆಧಾರದ ಅಡುಗೆ ಸಹಾಯಕಿ ಕೆಲಸ ನೀಡಲಾಗಿದೆ ಎಂದು ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ ರಾಷ್ಟ್ರಕ್ಕೆ ಮಾದರಿಯಾಗಿದ್ದು, ಬಂಗಾರದ ಪುರಾತನ ಮೌಲ್ಯ ನಿರ್ಧಾರಕ್ಕಾಗಿ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದ್ದು, ಕುಟುಂಬಕ್ಕೆ ನೀಡಿರುವುದು ಪ್ರಾಥಮಿಕ ಗೌರವ ಮಾತ್ರ ಎಂಬ ಸೂಚನೆಯನ್ನು ನೀಡಿದರು. ಆದರೆ, ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎಂಬ ಅಸಮಾಧಾನ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ.



















