
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಪ್ರತಿ ದಿನ ಸುಮಾರು 1000 ಗುಂಡಿಗಳನ್ನು ಮುಚ್ಚುವ ಕೆಲಸ ಜಿಬಿಎ ಕಡೆಯಿಂದ ಆಗುತ್ತಿದೆ, ಇದನ್ನು ಐಟಿ ಕಂಪನಿಗಳು ತಿಳಿದುಕೊಳ್ಳಲಿ ಎಂದು ಹೇಳಿದರು.
ಎಲ್ಲ ಕ್ಷೇತ್ರಗಳಲ್ಲೂ ರಸ್ತೆ ಗುಂಡಿಗಳು ಇರುತ್ತವೆ. ದೇಶದ ಎಲ್ಲೆಡೆ ಇರುವ ಸಮಸ್ಯೆ ಇದು. ಹಾಗಂತ ನಮ್ಮ ಕೆಲಸ ನಾವು ಮಾಡುತ್ತೇವೆ. ಇದನ್ನೇ ದೊಡ್ಡ ವಿಷಯ ಮಾಡಿ ಮಾಧ್ಯಮಗಳಲ್ಲಿ ಬಿಂಬಿಸುವ ಅಗತ್ಯವಿಲ್ಲ. ಇದು ಬರೀ ಕರ್ನಾಟಕ ರಾಜ್ಯದ ಸಮಸ್ಯೆ ಒಂದೇ ಅಲ್ಲ. ನಾನು ದೆಹಲಿಗೆ ಹೋಗಿದ್ದಾಗ ಒಂದು ಸುತ್ತು ಬಂದು ಎಲ್ಲ ನೋಡಿದೆ. ಇದೆಲ್ಲ ಆದ ಮೇಲೆ ನೀವೆಲ್ಲ ನಿಮ್ಮ ವರದಿಗಾರರನ್ನು ಕಳುಹಿಸಿ ದೆಹಲಿಯಲ್ಲಿ ಎಷ್ಟು ರಸ್ತೆ ಗುಂಡಿಗಳಿವೆ, ಪ್ರಧಾನ ಮಂತ್ರಿಗಳ ಮನೆ ಮುಂದಿನ ರಸ್ತೆಯಲ್ಲಿ ಎಷ್ಟಿವೆ ಎಂಬುದನ್ನು ನೋಡಬೇಕಾಗುತ್ತದೆ ಎಂದು ಹೇಳಿದರು.






















































