
ಹೊಳೆನರಸೀಪುರ: ಶಾಸಕ ಎಚ್.ಡಿ.ರೇವಣ್ಣ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ 22 ದಿನಗಳ ಬಳಿಕ ಬುಧವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಮತ್ತು ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ. ದೇವರ ಮೇಲೆ ನಂಬಿಕೆ ಇದೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಬರುವ ವಿಚಾರ ಏನು ಗೊತ್ತಿಲ್ಲ ಎಂದು ಹೇಳಿದರು.
‘ಕ್ಷೇತ್ರದ ಜನತೆ ದೇವೇಗೌಡರಿಗೆ 60 ವರ್ಷಗಳು ರಾಜಕೀಯವಾಗಿ ಬೆಂಬಲ ನೀಡಿದ್ದಾರೆ. ಕಳೆದ 25 ವರ್ಷಗಳಿಂದ ನಾನು ಜನರ ಆಶೀರ್ವಾದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈ ಜಿಲ್ಲೆಯ ಜನರ ಋಣ ನನ್ನ ಮೇಲಿದೆ, ನಾನು ಋಣಿಯಾಗಿರುತ್ತೇನೆ. ಜತೆಗೆ ನಾನು ಬದುಕಿರುವವರೆಗೂ ನನ್ನನ್ನ ಜನ ಕೈ ಬಿಡೋದಿಲ್ಲ ಎಂಬ ವಿಶ್ವಾಸ ನನಗಿದೆ’ ಎಂದು ಎಚ್.ಡಿ.ರೇವಣ್ಣ ಹೇಳಿದರು.
‘ಜಿಲ್ಲೆ ಹಾಗೂ ತಾಲೂಕಿನ ಜನರ ಜೊತೆ ನಾನು ಬದುಕಿರುವವರೆಗೆ ನಿಮ್ಮ ಜೊತೆ ನಾನು, ದೇವೇಗೌಡರು, ಕುಮಾರಸ್ವಾಮಿ ಮತ್ತು ನಮ್ಮ ಕುಟುಂಬ ಇರುತ್ತದೆ. ಯಾರು ದೃತಿಗೆಡಬೇಕಾದ ಪ್ರಮೇಯವಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದರು.