
ಬೆಂಗಳೂರು : ತನ್ನ ಜೀವನಾಧಾರವಾಗಿದ್ದ 2.4 ಎಕರೆ ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ವರ್ಗಾಯಿಸಿದ್ದ ವೃದ್ಧನೊಬ್ಬರನ್ನು ನಂತರ ಪುತ್ರಿಯರು ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ, ಅವರು ಸಲ್ಲಿಸಿದ್ದ ಗಿಫ್ಟ್ ಡೀಡ್ ರದ್ದುಪಡಿಸುವ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿದೆ.
ತುಮಕೂರಿನ ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ 84 ವರ್ಷದ ವೆಂಕಟಯ್ಯ ಅವರ ಅರ್ಜಿಯನ್ನು ಪರಿಗಣಿಸಿದ ನ್ಯಾ. ಸೂರಜ್ ಗೋವಿಂದರಾಜು ಅವರ ಏಕಸದಸ್ಯ ಪೀಠ, ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಹಾಗೂ ಕಲ್ಯಾಣ ಕಾಯ್ದೆ–2007ರ ಅಡಿಯಲ್ಲಿ ಪುತ್ರಿಯರ ಹೆಸರಿಗೆ ಮಾಡಿದ್ದ ಉಡುಗೊರೆ ಪತ್ರವನ್ನು ರದ್ದುಗೊಳಿಸುವಂತೆ ಆದೇಶಿಸಿದೆ.
ವೃದ್ಧಾಪ್ಯದಲ್ಲಿ ಪೋಷಕರ ಆರೈಕೆ ಹಾಗೂ ಜೀವನ ನಿರ್ವಹಣೆಗೆ ಸಂತಾನ ವಿಫಲವಾದರೆ, ನ್ಯಾಯಾಲಯ ಮಧ್ಯಪ್ರವೇಶಿಸಿ ಹಿರಿಯ ನಾಗರಿಕರ ಹಕ್ಕು ಮತ್ತು ಆಸ್ತಿಯನ್ನು ರಕ್ಷಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಗಿಫ್ಟ್ ಡೀಡ್‌ನಲ್ಲಿ ನಿರ್ವಹಣೆಯ ಸ್ಪಷ್ಟ ಷರತ್ತು ಇಲ್ಲದಿದ್ದರೂ, ಪ್ರಕರಣದ ಸನ್ನಿವೇಶ ಹಾಗೂ ನಡೆವಳಿಕೆಯನ್ನು ಪರಿಗಣಿಸಬಹುದು ಎಂದು ತಿಳಿಸಿದೆ.
ಪುತ್ರಿಯರು ನೋಡಿಕೊಳ್ಳುವ ಭರವಸೆಯ ಮೇರೆಗೆ ಆಸ್ತಿಯನ್ನು ವರ್ಗಾಯಿಸಿದ್ದ ವೆಂಕಟಯ್ಯ, ನಂತರ ಆರೈಕೆ ಸಿಗದೆ ಹೋದ ಕಾರಣ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಹೈಕೋರ್ಟ್ ತೀರ್ಪು ಅವರ ಪರವಾಗಿ ಹೊರಬಂದಿದೆ.



















