
ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾರತ ಬಸ್ ಮತ್ತು ಕಾರು ನಿರ್ವಾಹಕರ ಒಕ್ಕೂಟ (ಬಿಒಸಿಐ)ದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ 3 ದಿನಗಳ ಭಾರತದ ಬಹುಮಾದರಿ ಸಾರಿಗೆ ಪ್ರದರ್ಶನ ಪ್ರವಾಸ್ 4.0ಗೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ್ದು ಈ ವೇಳೆ ಪರಿಸರ ಸಂರಕ್ಷಣೆ ಹಾಗೂ ಭವಿಷ್ಯ ದೃಷ್ಟಿಯಿಂದಾಗಿ ಹಸಿರು ಇಂಧನ ಬಳಕೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಉತ್ತಮ ಪರಿಸರ ನಿರ್ಮಾಣ ಹಾಗೂ ಭದ್ರ ಭವಿಷ್ಯಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳಿಂದ ಚಲಿಸುವ ವಾಹನಗಳಿಗಿಂತ ಹಸಿರು ಇಂಧನದ ಮೂಲಕ ಚಲಿಸುವ ವಾಹನಗಳತ್ತ ಜನರು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಪ್ರಮುಖವಾಗಿ ಎಲೆಕ್ನಿಕ್, ಎಥೆನಾಲ್, ಸಿಎನ್‌ಜಿ ಮೂಲಕ ಸಂಚರಿಸುವ ವಾಹನಗಳ ಬಳಕೆ ಹೆಚ್ಚಿಸಬೇಕಿದೆ. ಅಲ್ಲದೆ, ಭವಿಷ್ಯದಲ್ಲಿ ಅಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಅದಕ್ಕಾಗಿಯೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಯಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಕೆಲವೆಡೆ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.













