
ಪ್ರಯಾಗ್ರಾಜ್: ವಿವಾಹಿತ ಪುರುಷನು ವಯಸ್ಕ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನುಬದ್ಧವಾಗಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ನೈತಿಕತೆ ಮತ್ತು ಕಾನೂನನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಸಂಬಂಧದಲ್ಲಿದ್ದರೆ ಅದು ಅಪರಾಧವಾಗುವುದಿಲ್ಲ ಎಂದು ಹೇಳಿ, ಅವರ ಭದ್ರತೆಗಾಗಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ.
ಪುರುಷನು ಈಗಾಗಲೇ ವಿವಾಹಿತನಾಗಿರುವುದರಿಂದ, ಅವನು ಇನ್ನೊಬ್ಬ ಮಹಿಳೆಯೊಂದಿಗೆ ಇರುವುದು ಅಪರಾಧ ಎಂದು ಮಹಿಳೆಯ ಕುಟುಂಬದವರು ವಾದಿಸಿದರು. ಆದರೆ, ಕಾನೂನನ್ನು ಸಾಮಾಜಿಕ ನೈತಿಕತೆಯಿಂದ ಪ್ರತ್ಯೇಕವಾಗಿ ಇಡಬೇಕು ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ, ಮಹಿಳೆ ತಾನು ವಯಸ್ಕಳಾಗಿದ್ದು ಸ್ವಇಚ್ಛೆಯಿಂದ ಆ ವ್ಯಕ್ತಿಯೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸಿದ್ದಾಳೆ. ಆದರೆ, ಕುಟುಂಬದ ವಿರೋಧ ಮತ್ತು ಜೀವ ಬೆದರಿಕೆ ಹಿನ್ನೆಲೆ ನ್ಯಾಯಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.






















































