
ಮಂಗಳವಾರ ಸುಪ್ರೀಂಕೋರ್ಟ್ ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ ನೀಟ್-ಯುಜಿ ಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು ಅದೇನೆಂದರೆ, 2 ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ. ದೇಶದೆಲ್ಲೆಡೆ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ ಎಂಬುದಕ್ಕೆ ಪುರಾವೆ ಇಲ್ಲ. ಹೀಗಾಗಿ ಮರುಪರೀಕ್ಷೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.
ನೀಟ್ನಲ್ಲಿ ದೇಶವ್ಯಾಪಿ ಅಕ್ರಮ ನಡೆದಿದ್ದು, ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿವೆ. ಕೆಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ಗ್ರೇಸ್ ಅಂಕ ನೀಡಲಾಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ, ಮರು ಪರೀಕ್ಷೆ ನಡೆಸಬೇಕು ಎಂದು ಅರ್ಜಿಗಳು ಸಲ್ಲಿಕೆಯಾಗಿದ್ದು ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ಡಿ.ವೈ. ಚಂದ್ರಚೂಡ, ನ್ಯಾ| ಜೆ.ಬಿ. ಪರ್ದೀವಾಲಾ ಹಾಗೂ ನ್ಯಾ| ಮನೋಜ್ ಮಿಶ್ರಾ ಅವರ ಪೀಠವು, ಪಟನಾ ಮತ್ತು ಹಜಾರಿಬಾಗ್ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬುದು ನಿರ್ವಿವಾದ. ಅಲ್ಲಿನ 155 ವಿದ್ಯಾರ್ಥಿಗಳು ಮಾತ್ರ ಪ್ರಶ್ನೆಪತ್ರಿಕೆ ಸೋರಿಕೆಯ ಫಲಾನುಭವಿಗಳಾಗಿದ್ದಾರೆ ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ದೇಶಾದ್ಯಂತ ಪರೀಕ್ಷಾ ಅಕ್ರಮ ನಡೆದಿರುವುದನ್ನು ಸಾಬೀತುಪಡಿಸುವ ಪುರಾವೆಗಳಿಲ್ಲ. ಮರುಪರೀಕ್ಷೆಗೆ ಆದೇಶ ನೀಡಿದರೆ ಪರೀಕ್ಷೆಗೆ ಬರೆದಿದ್ದ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಮರುಪರೀಕ್ಷೆಗೆ ಆದೇಶಿಸಿದರೆ ಮುಂದಿನ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿ ಮೇಲೂ ಪರಿಣಾಮ ಬೀರುತ್ತದೆ. ಮುಂದಿನ ಪ್ರಕ್ರಿಯೆಯೇ ಹಳಿ ತಪ್ಪುತ್ತದೆ. ಭವಿಷ್ಯದಲ್ಲಿ ವೈದ್ಯರ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮರುಪರೀಕ್ಷೆಗೆ ಆದೇಶ ನೀಡಲಾಗದು ಎಂದು ಸ್ಪಷ್ಟಪಡಿಸಿದೆ.











