
ರಾಜ್ಯದಲ್ಲಿ ನೂತನವಾಗಿ ಸ್ಥಾಪಿತವಾಗಿರುವ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸರ್ಕಾರವು ಈಗಾಗಲೇ ನಿಗಮಕ್ಕೆ ರೂ.10 ಕೋಟಿ ಅನುದಾನ ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಪ್ರತಿವರ್ಷ ರೂ.100 ಕೋಟಿ ಅನುದಾನ ನೀಡುವ ಭರವಸೆ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಘೋಷಿಸಿದ ಅನುದಾನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಮಂಜುನಾಥ್ ಪೂಜಾರಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕುರಿತಂತೆ ಬೇಗನೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈಗಾಗಲೇ ಮಂಜೂರಾದ ರೂ.10 ಕೋಟಿ ಅನುದಾನದಲ್ಲಿ ರೂ.4 ಕೋಟಿಯನ್ನು ಅನುದಾನ ಅರಿವು ಕಾರ್ಯಕ್ರಮಗಳಿಗೆ, ರೂ.2.5 ಕೋಟಿಯನ್ನು ಗಂಗಾ ಕಲ್ಯಾಣ ಯೋಜನೆಗೆ ಹಾಗೂ ರೂ.1.5 ಕೋಟಿಯನ್ನು ಸಮುದಾಯದ ಮುರ್ತೆದಾರಿಕೆ ವೃತ್ತಿಯಲ್ಲಿ ತೊಡಗಿರುವವರಿಗಾಗಿ ಉಡುಪಿ, ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪೈಲಟ್ ಯೋಜನೆಯಡಿ ಮಹಿಳೆಯರಿಗೆ ಆದ್ಯತೆ ನೀಡಿ ಸಾಲ ಸೌಲಭ್ಯ ಒದಗಿಸಲು ಬಳಸಲಾಗಿದೆ ಎಂದು ಮಂಜುನಾಥ್ ಪೂಜಾರಿ ಅವರು ಮಾಹಿತಿ ನೀಡಿದ್ದಾರೆ.





















