
ಇತ್ತೀಚೆಗೆ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ರಣವೀರ್ ಅಲಹಾಬಾದಿಯಾಗೆ ಸಂದರ್ಶನ ನೀಡಿದ್ದು ಈ ವೇಳೆ ಅವರು ಪಾನ್ ಮಸಾಲ ಬ್ರ್ಯಾಂಡ್ನ ಪ್ರಚಾರ ಮಾಡುವವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಟೈಗರ್ ಶ್ರಾಫ್ ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವವರು. ಇವರು ಪಾನ್ ಮಸಾಲ ಸೇವನೆ ಮಾಡುವುದಿಲ್ಲ. ಆದಾಗ್ಯೂ ವಿಮಲ್ ಪ್ರಚಾರದಲ್ಲಿ ಇವರು ಭಾಗಿ ಆಗುತ್ತಿದ್ದಾರೆ.
ಈ ಬಗ್ಗೆ ನೇರವಾಗಿ ಅವರ ಹೆಸರನ್ನು ಹೇಳದೆ ಟೀಕಿಸಿರುವ ಜಾನ್ ಅಬ್ರಾಹಂ ಜನರು ಫಿಟ್ನೆಸ್ ಬಗ್ಗೆ ಮಾತನಾಡುತ್ತಾರೆ. ಆ ಬಳಿಕ ಅದೇ ವ್ಯಕ್ತಿಗಳು ಪಾನ್ ಮಸಾಲ ಪ್ರಚಾರ ಮಾಡುತ್ತಾರೆ. ನಾನು ಇಂಡಸ್ಟ್ರಿಯ ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಅವರನ್ನು ಅಗೌರವಿಸುತ್ತಿಲ್ಲ. ಒಂದು ವಿಚಾರವನ್ನು ನಾನು ಸ್ಪಷ್ಟಪಡಿಸಬೇಕು. ನಾನು ನನ್ನ ಬಗ್ಗೆ ಮಾತನಾಡುತ್ತೇನೆ. ನಾನು ಸಾವನ್ನು ಮಾರಾಟ ಮಾಡಲ್ಲ. ಪಾನ್ ಮಸಾಲ ಮಾರುವುದನ್ನು ಸಾವನ್ನು ಮಾರಾಟ ಮಾಡಿದಂತೆ ಎಂದು ಅವರು ಹೇಳಿದ್ದಾರೆ.













