
ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ರಾಷ್ಟ್ರಭಕ್ತ ಬಳಗದ ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸಿಡಿದೆದ್ದು, ಇದೀಗ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಬೆಂಬಲ ಘೋಷಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಬಿಜೆಪಿ ಅಂದರೆ ಈಶ್ವರಪ್ಪ, ಈಶ್ವರಪ್ಪ ಅಂದರೆ ಪಕ್ಷ ಎನ್ನುತ್ತಿದ್ದ ಸಂದರ್ಭದಲ್ಲೇ ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಅದೇ ರೀತಿ ನಾನು ಸತ್ತರೆ ನನ್ನ ಎದೆ ಮೇಲೆ ಬಿಜೆಪಿ ಬಾವುಟ ಇರಬೇಕು ಎಂದು ಹೇಳುವ ರಘುಪತಿ ಭಟ್ ಅವರಿಗೂ ಪಕ್ಷದಲ್ಲಿ ಮೋಸವಾಯಿತು ಎಂದು ಹೇಳಿದರು.
ನಮ್ಮ ಸ್ಪರ್ಧೆಯಿಂದ ಎಷ್ಟರಮಟ್ಟಿಗೆ ಪಕ್ಷ ಶುದ್ಧೀಕರಣ ಆಗುತ್ತದೆ ಎಂಬುದು ಲೋಕಸಭೆ, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗುತ್ತದೆ. ಚುನಾವಣೆ ಮುಗಿಯುತ್ತಿದ್ದಂತೆ ರಘುಪತಿಗೆ ನೋಟಿಸ್ ಬರಬಹುದು. ನನಗೆ ಆಗ ಖುಷಿ. ನಾನೊಬ್ಬನೇ ಆಗಿದ್ದೆನಲ್ಲ, ಸದ್ಯ ಈಗ ಭಟ್ರು ಜೊತೆಗೆ ಬರ್ತಾರಲ್ಲ ಸಮಾಧಾನ ಎಂದು ಈಶ್ವರಪ್ಪ ತಮಾಷೆಯಾಗಿ ನುಡಿದರು.