
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪಹಲ್ಗಾಂ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಜತೆಗೆ ಪ್ರತೀಕಾರದ ಯುದ್ಧ ಬೇಡ ಎಂಬ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿ ನಾನು ಅನಿವಾರ್ಯವಾದಾಗ ಯುದ್ಧ ಮಾಡಬೇಕು ಎಂದಿದ್ದೇನೆಯೇ ಹೊರತು ಯುದ್ಧ ಮಾಡಲೇಬಾರದು ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಪಾಕ್ ಮೇಲೆ ಯುದ್ಧದ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ನನ್ನ ಹೇಳಿಕೆ ತಿರುಚಲಾಗಿದೆ. ತಕ್ಷಣಕ್ಕೆ ಯುದ್ಧ ಬೇಡ, ಆದರೆ ಯುದ್ಧ ಮಾಡಲೇಬಾರದು ಅಂತ ಏನೂ ಹೇಳಿಲ್ಲ. ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ, ಭಾರತವನ್ನು ಕೆಣಕಿದಾಗ ಅದು ಪಾಕಿಸ್ತಾನವೇ ಇರಲಿ ಅಥವಾ ಯಾವುದೇ ದೇಶವಾಗಿರಲಿ ಸಹಿಸಲು ಸಾಧ್ಯವೇ ಇಲ್ಲ. ಅನಿವಾರ್ಯವಾದಾಗ ಪಾಕ್ ವಿರುದ್ಧ ಭಾರತ ಯುದ್ಧ ಮಾಡಿಯೇ ಸಿದ್ಧ. ಇದನ್ನು ಪ್ರತಿ ಸಂದರ್ಭದಲ್ಲೂ ಭಾರತ ಸಾಬೀತುಪಡಿಸಿದೆ’ ಎಂದು ಹೇಳಿದರು.





