
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ್ದು ಈ ವೇಳೆ ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಇದ್ದೇ ಇರುತ್ತದೆ. ಮಹಿಳೆಯರಿಗೆ ಹೆಚ್ಚಿನ ಶಕ್ತಿ ನೀಡುತ್ತೇವೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ರೂಪಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ್ದು ಕಾಂಗ್ರೆಸ್. ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದ್ದೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ತಿಳಿಸಿದ ಶಿವಕುಮಾರ್, ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಬಗ್ಗೆ ಚಿಂತಿಸುವ ಬದಲು ತಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಗಮನಹರಿಸಲಿ ಎಂದು ತಿರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಧೀಮಂತ ನಾಯಕ. ರಾಜ್ಯಕ್ಕೆ ಗೌರವ ತಂದುಕೊಟ್ಟ ಅವರು ಮಹಾತ್ಮಾ ಗಾಂಧೀಜಿ ಅವರ ಚಿಂತನೆ ಅಳವಡಿಸಿಕೊಂಡ ನಾಯಕರು. ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷರಾದ ನಿಜಲಿಂಗಪ್ಪ ಅವರ ಬಳಿಕ ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಶಿವಕುಮಾರ್ ಸ್ಮರಿಸಿದರು.

























































