
ಉಡುಪಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ನನ್ನ ವಿರುದ್ಧ ಹಗರಣದ ಆರೋಪ ಮಾಡಿದ್ದಾರೆ. ಆರೋಪ ವಾಪಸ್ ಪಡೆಯದಿದ್ದರೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದ್ದಾರೆ.
ನಾನು ತಪ್ಪು ಮಾಡಿದ್ದರೆ ಜೈಲು ಶಿಕ್ಷೆ ಕೊಡುವ ಅಧಿಕಾರ ನಿಮಗಿತ್ತು. ಸಿಐಡಿಯೂ ನಿಮ್ಮ ಕೈಯಲ್ಲಿದೆ, ಒಂದು ವರ್ಷದಿಂದ ನೀವೇ ಮುಖ್ಯಮಂತ್ರಿಯಾಗಿದ್ದೀರಿ. ಆದರೆ ಕಳೆದೊಂದು ವರ್ಷದಿಂದ ಅದ್ಯಾವುದೂ ನೀವು ಮಾಡಿಲ್ಲ. ನಾನು ಮಂತ್ರಿಯಾಗಿದ್ದಾಗ ವಿಪಕ್ಷ ನಾಯಕರಾಗಿದ್ದಿರಿ ಆಗಲೂ ಏನೂ ಸೊಲ್ಲೆತ್ತಿಲ್ಲ. ಈಗ ವಾಲ್ಮೀಕಿ ಹಗರಣ ಬಯಲಿಗೆ ಬರ್ತಿದ್ದಂತೆ ಬೇರೆಯವರ ತಲೆಮೇಲೆ ಹಾಕಲು ಹೀಗೆ ಹೇಳುತ್ತಿದ್ದೀರಿ. ನನ್ನ ಹೆಸರು ಉಲ್ಲೇಖಿಸಿರುವುದನ್ನು ವಾಪಾಸ್ ಪಡೆಯಿರಿ ಇಲ್ಲವಾದರೆ ತಕ್ಷಣ ಈ ಪ್ರಕರಣವನ್ನ ಸಿಬಿಐಗೆ ವಹಿಸಿ. ಒಂದು ವಾರ ಸಮಯ ಕೊಡುತ್ತೇನೆ. ವಾರದೊಳಗೆ ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತುಕೊಳ್ಳುತ್ತೇನೆ ಈ ಮೂಲಕ ವಾಲ್ಮೀಕಿ ನಿಗಮ ಹಗರಣ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯಕ್ಕೆ ಅಪಚಾರವಾಗಬಾರದು. ಎಂದು ಹೇಳಿದರು.
ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಕೆ ಮಾಡುವ ಮೂಲಕ ದೊಡ್ಡ ಅಪರಾಧ ಮಾಡಿರುವ ಕಾಂಗ್ರೆಸ್ ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನನ್ನ ವಿರುದ್ಧ ಮಾಡಿರುವ ಹಗರಣದ ಆರೋಪ ವಾಪಸ್ ಪಡೆಯಿರಿ’: ಸಿಎಂ ಗೆ ಒಂದು ವಾರದ ಗಡುವು ಕೊಟ್ಟ ಕೋಟ ಶ್ರೀನಿವಾಸ್ ಪೂಜಾರಿ








