
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದಲ್ಲಿ ನಂದಿನಿ ವತಿಯಿಂದ ಗುಡ್ಲೈಫ್ ಹೈ ಅರೋಮಾ ತುಪ್ಪ, ಮೀಡಿಯಂ ಫ್ಯಾಟ್ ಪನೀರ್, ಹೆಚ್ಚು ಪ್ರೊಟೀನ್ ಹೊಂದಿರುವ ಎನ್-ಪ್ರೊಮಿಲ್ಕ್ ಹಾಲು, ಪ್ರೊಬಯೋಟಿಕ್ ಮೊಸರು, ಮಾವು ಮತ್ತು ಸ್ಟ್ರಾಬೆರಿ ಲಸ್ಸಿ ಸೇರಿದಂತೆ ಹಲವು ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಸ್ವಾಮಿ ಹಾಗೂ ಶಾಸಕರಾದ ನಂಜೇಗೌಡ ಮತ್ತು ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ಹೊಸ ಉತ್ಪನ್ನಗಳಲ್ಲಿ ಎನ್-ಪ್ರೊಮಿಲ್ಕ್ ಹಾಲು ಸಾಮಾನ್ಯ ಟೋನ್ಡ್ ಹಾಲಿಗಿಂತ ಶೇ.18 ಹೆಚ್ಚು ಪ್ರೊಟೀನ್ ಹೊಂದಿದ್ದು, ಅರ್ಧ ಲೀಟರ್ ಪೊಟ್ಟಣದಲ್ಲಿ ಮಾರುಕಟ್ಟೆಗೆ ಬರುತ್ತದೆ. ಕಡಿಮೆ ಜಿಡ್ಡಿನಾಂಶದ ಮೀಡಿಯಂ ಫ್ಯಾಟ್ ಪನೀರ್, ಹೈ ಅರೋಮಾ ಗುಡ್ಲೈಫ್ ತುಪ್ಪ ಹಾಗೂ ಕ್ಯೂಆರ್ ಕೋಡ್ ಹೊಂದಿರುವ ಶುದ್ಧ ತುಪ್ಪವೂ ಬಿಡುಗಡೆಯಾಗಿದೆ. ಜೊತೆಗೆ ಪ್ರೊಬಯೋಟಿಕ್ ಮೊಸರು, ಲಸ್ಸಿ, ಡೇರಿ ವೈಟ್ನರ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಪರಿಚಯಿಸಲಾಗಿದ್ದು, 160 ಮಿ.ಲೀ. ನಂದಿನಿ ಹಸುವಿನ ಹಾಲು ಮತ್ತು 140 ಗ್ರಾಂ ಮೊಸರು ₹10ಕ್ಕೆ ಲಭ್ಯವಾಗಲಿದೆ.








