
ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ತೆರಿಗೆ ವಂಚನೆ, ನಕಲಿ ಜಿಎಸ್ಟಿ ಬಿಲ್ಗಳು ಹಾಗೂ ಬೋಗಸ್ ಕಂಪನಿಗಳ ವಿರುದ್ಧ ಯಾವುದೇ ರಾಜಿ ಬೇಡ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆ ಸರ್ಕಾರದ ಆದಾಯದ ಪ್ರಮುಖ ಶಕ್ತಿ ಎಂದು ಹೇಳಿ, ಈ ಹಣಕಾಸು ವರ್ಷದ ತೆರಿಗೆ ಸಂಗ್ರಹ ಗುರಿ ಮೀರುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಗಡಿಗಳು ಹಾಗೂ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿ, ತೆರಿಗೆ ವಂಚನೆ ತಡೆಯಲು ನೆರೆಯ ರಾಜ್ಯಗಳೊಂದಿಗೆ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಸಬೇಕು. ಸುಮಾರು 12 ಲಕ್ಷ ತೆರಿಗೆದಾರರನ್ನು ತಂತ್ರಜ್ಞಾನ ಹಾಗೂ ಡೇಟಾ ವಿಶ್ಲೇಷಣೆಯ ಮೂಲಕ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ ಸಿಎಂ, ಪ್ರಾಮಾಣಿಕ ತೆರಿಗೆದಾರರಿಗೆ ತೊಂದರೆ ಕೊಡಬಾರದು, ಆದರೆ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ಶೇ.9ರಷ್ಟು ಬೆಳವಣಿಗೆ ದಾಖಲಿಸಿದ್ದು, ದೇಶದಲ್ಲಿ ತೆಲಂಗಾಣದ ನಂತರ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಮೊದಲ ಸ್ಥಾನ ಪಡೆಯಲು ಅಧಿಕಾರಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಐಐಟಿ ಹೈದರಾಬಾದ್ ಸಹಯೋಗದ ಜಿಎಸ್ಟಿ ಅನಾಲಿಟಿಕಲ್ ಪೋರ್ಟಲ್ ಮೂಲಕ ತೆರಿಗೆ ವಂಚನೆ ಪತ್ತೆ ಹಚ್ಚಲಾಗುತ್ತಿದ್ದು, ಆನ್ಲೈನ್ ಸೇವೆಗಳ ಮೂಲಕ ತೆರಿಗೆದಾರ ಸ್ನೇಹಿ ವ್ಯವಸ್ಥೆ ರೂಪಿಸಲಾಗಿದೆ. ಇದುವರೆಗೆ ನಕಲಿ ಕಂಪನಿ ಹಾಗೂ ಐಟಿಸಿ ಪ್ರಕರಣಗಳಲ್ಲಿ 166 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಹಾಗೂ ಬಂಧನ ಪ್ರಕ್ರಿಯೆ ಇನ್ನಷ್ಟು ವೇಗಗೊಳಿಸಲು ಸಿಎಂ ಸೂಚಿಸಿದರು.


































