
ಹೈದರಾಬಾದ್: ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ತೀವ್ರಗೊಂಡಿದ್ದು ಯಮ್ಮಿಗನೂರುದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಾಸ್ಬುಕ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಲಡ್ಡು ತಯಾರಿಕೆಗೆ ಬಾತ್ರೂಮ್ ಹಾಗೂ ಶೌಚಗೃಹ ಸ್ವಚ್ಛತೆಗೆ ಬಳಸುವ ರಾಸಾಯನಿಕಗಳಿಂದ ಕಲಬೆರಕೆಯಾದ ತುಪ್ಪವನ್ನು ಬಳಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವೈಎಸ್ಆರ್ಸಿಪಿ ಆಡಳಿತದ ಅವಧಿಯಲ್ಲಿ ಸುಮಾರು ಐದು ವರ್ಷಗಳ ಕಾಲ ಇಂತಹ ಕಲಬೆರಕೆ ನಡೆದಿದ್ದು, ಇದು ದೇವರ ವಿರುದ್ಧ ಮಾಡಿದ ಮಹಾಪಾಪ ಎಂದು ಹೇಳಿದರು. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ವರದಿಯನ್ನು ಉಲ್ಲೇಖಿಸಿ, ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇದ್ದದ್ದು ದೃಢಪಟ್ಟಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಗನ್ ಮೋಹನ್ ರೆಡ್ಡಿ, ತಿರುಪತಿ ಲಡ್ಡು ಬಗ್ಗೆ ಸುಳ್ಳು ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ನಟಿ ಹಾಗೂ ಮಾಜಿ ಸಚಿವೆ ರೋಜಾ ಸಹ ಜಗನ್ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರ ಆಂಧ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



















