
ನೆಲ್ಲೂರು: ತಿರುಪತಿ ತುಪ್ಪ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಪೂರ್ಣಗೊಳಿಸಿ ಅಂತಿಮ ಚಾರ್ಜ್ಶೀಟ್ ಸಲ್ಲಿಸಿದ್ದು ಈ ಪ್ರಕರಣದಲ್ಲಿ 9 ಟಿಟಿಡಿ ಅಧಿಕಾರಿಗಳು, 5 ಡೈರಿ ತಜ್ಞರು ಸೇರಿದಂತೆ ಒಟ್ಟು 36 ಮಂದಿಯನ್ನು ಆರೋಪಿಗಳಾಗಿ ಗುರುತಿಸಿ ಶುಕ್ರವಾರ (ಜ.30) ನೆಲ್ಲೂರು ಎಸಿಬಿ ನ್ಯಾಯಾಲಯಕ್ಕೆ ವರದಿ ನೀಡಲಾಗಿದೆ.
2021ರಿಂದ 2024ರವರೆಗೆ ಸುಮಾರು 250 ಕೋಟಿ ರೂ. ಮೌಲ್ಯದ 68 ಲಕ್ಷ ಕೆಜಿ ಕಳಪೆ ತುಪ್ಪವನ್ನು ದೇವಾಲಯಕ್ಕೆ ಪೂರೈಸಲಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕಲಬೆರಕೆ ನಡೆಸಲಾಗಿದ್ದು, ಹಂದಿ ಹಾಗೂ ಗೋಮಾಂಸದ ಕೊಬ್ಬು ಸೇರಿ ವಿವಿಧ ಪದಾರ್ಥಗಳನ್ನು ಮಿಶ್ರಣ ಮಾಡಿ ಟ್ಯಾಂಕರ್ಗಳ ಮೂಲಕ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಅವಧಿಯಲ್ಲಿ ದೇವಾಲಯಕ್ಕೆ ತುಪ್ಪದ ಪ್ರಮುಖ ಪೂರೈಕೆದಾರರಾದ ಭೋಲೆ ಬಾಬಾ ಡೈರಿ ಹಾಲು ಅಥವಾ ಬೆಣ್ಣೆ ಖರೀದಿಸದೇ ಪಾಮ್ ಎಣ್ಣೆ, ಕೇನೋಲಾ ಎಣ್ಣೆ ಮತ್ತು ರಾಸಾಯನಿಕಗಳ ಸಹಾಯದಿಂದ ಸಂಶ್ಲೇಷಿತ ತುಪ್ಪ ತಯಾರಿಸಿದೆ ಎಂದು ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಲಾಗಿದ್ದು ದೆಹಲಿ ಮೂಲದ ವ್ಯಾಪಾರಿ ಅಜಯ್ ಕುಮಾರ್ ಸುಗಂಧ್ ಸೇರಿದಂತೆ ಕೆಲವರು ನಕಲಿ ತುಪ್ಪದ ರುಚಿ ಹಾಗೂ ಪರಿಮಳ ಸೃಷ್ಟಿಸಲು ಅಗತ್ಯ ರಾಸಾಯನಿಕಗಳನ್ನು ಒದಗಿಸಿದ್ದಾಗಿ ತಿಳಿದು ಬಂದಿದೆ.



















