
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ರದ್ದಾಗಿದ್ದು ಇದೀಗ ದರ್ಶನ್ ಮತ್ತೆ ಜೈಲು ಸೇರಿರುವುದರಿಂದ ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ.
ಮಿಲನ ಪ್ರಕಾಶ್ ನಿರ್ದೇಶನದ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮುಗಿಸಿ ಅದರ ಡಬ್ಬಿಂಗ್ ಕೆಲಸವನ್ನು ದರ್ಶನ ಮುಗಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಬೇಕು ಎನ್ನುವಷ್ಟರಲ್ಲಿ ದರ್ಶನ್ ಅವರ ಜಾಮೀನು ರದ್ದಾಗಿದೆ.
ಹೀಗಾಗಿ ದರ್ಶನ್ ಜೈಲಿನಲ್ಲಿ ಇದ್ದರೂ ಅವರ ‘ದಿ ಡೆವಿಲ್’ ಸಿನಿಮಾಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಅಭಿಮಾನಿಗಳಿಗೆ ಸಂದೇಶ ಸಾರಿದ್ದಾರೆ. ಈ ಕುರಿತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಹಂಚಿಕೊಂಡಿದ್ದಾರೆ.
“ಎಲ್ಲರಿಗೂ ನಮಸ್ಕಾರ,
ನಾನು ವಿಜಯಲಕ್ಷ್ಮಿ ದರ್ಶನ್ ನಿಮ್ಮ ಪ್ರೀತಿಯ ದರ್ಶನ್ ರವರು ನಿಮಗೆ ಕಳಿಸಿರುವ ಸಂದೇಶ.
ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ ಪ್ರೀತಿಯ ದಾಸನ ಶಿರಸಾಷ್ಟಾಂಗ ನಮಸ್ಕಾರಗಳು.
ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೇ ಇದ್ದರೂ, ಹೇಗೆ ಇದ್ದರೂ ನಿಮ್ಮಗಳ ಶ್ರೇಯೋಭಿಲಾಷೆಯನ್ನೇ ಬಯಸುತ್ತೇನೆ. ಪ್ರಸಕ್ತ ವಿದ್ಯಾಮಾನ ಏನೇ ಇದ್ದರೂ ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೋಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದದ್ದು ನನ್ನ ಆದ್ಯ ಕರ್ತವ್ಯ. ಹಾಗಾಗಿ ನನ್ನ ‘ದಿ ಡೆವಿಲ್’ ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಹಾಗೂ ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆ ಎಂದು ದೃಢವಾಗಿ ನಂಬಿದ್ದೇನೆ.”ಎಂದು ಪೋಸ್ಟನಲ್ಲಿ ಬರೆದುಕೊಂಡಿದ್ದಾರೆ..