
ನವದೆಹಲಿ: ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವಲ್ಲಿ ಕಠಿಣ ನಿಲುವು ತಾಳಿರುವ ಸುಪ್ರೀಂ ಕೋರ್ಟ್, ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡಬಾರದು ಎಂದು ವಿಚಾರಣಾ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ಗಳಿಗೆ ಸೂಚಿಸಿದೆ.
ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಿದ್ದೇ ಹೊರತು ಬೇರೆ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಆರೋಪಿಯೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಡಿಜಿಟಲ್ ಅರೆಸ್ಟ್ ಪ್ರಕರಣಗಳು ಅತ್ಯಂತ ಗಂಭೀರವಾಗಿದ್ದು, ವಿಶೇಷವಾಗಿ ಹಿರಿಯ ನಾಗರಿಕರ ಜೀವಿತದ ಉಳಿತಾಯವನ್ನು ಕಸಿದುಕೊಳ್ಳುವ ಅಪರಾಧವಾಗಿದೆ. ಇದು ಡಕಾಯಿತಿಗೆ ಸಮಾನ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಇಂತಹ ಪ್ರಕರಣಗಳನ್ನು ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.






















































