
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜನಸಾಮಾನ್ಯರು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಅನುಕೂಲವಾಗುವ ಹಲವು ಮಹತ್ವದ ನಿರ್ಧಾರಗಳನ್ನು ಘೋಷಿಸಿದ್ದಾರೆ. ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಅವರು ಪ್ರಕಟಿಸಿದರು.
ಇದರ ಜೊತೆಗೆ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ₹2,000 ಕೋಟಿ ಅನುದಾನ ಮೀಸಲಿಡಲಾಗಿದ್ದು, 2,500 ಚದರ ಅಡಿ ವರೆಗಿನ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡುವ ಮೂಲಕ ಮನೆ ಮಾಲೀಕರಿಗೆ ಮಹತ್ವದ ರಿಲೀಫ್ ಒದಗಿಸಲಾಗಿದೆ.
ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಖಾಸಗಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಪ್ರತಿ ಗ್ರಾಮ ಪಂಚಾಯತ್ನಲ್ಲಿ ಭಾರತ್ ಜೋಡೋ ಯುವಕ ಸಂಘ ಸ್ಥಾಪನೆಗೆ ₹10,000 ನೆರವು ನೀಡಲಾಗುವುದು ಎಂದು ಘೋಷಿಸಿದರು.
ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವುದಾಗಿ ಡಿಕೆ ಶಿವಕುಮಾರ್ ತಿಳಿಸಿದರು.
ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ, ರೈತರು, ಕಾರ್ಮಿಕರು ಹಾಗೂ ಎಲ್ಲ ವರ್ಗದ ಜನರ ಕಲ್ಯಾಣವೇ ತಮ್ಮ ಸರ್ಕಾರದ ಆದ್ಯತೆಯಾಗಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವ ಭರವಸೆಯನ್ನೂ ನೀಡಿದರು.
“ಈ ಮುಖ್ಯಮಂತ್ರಿ ಹುದ್ದೆ ನನ್ನದೇ ಅಲ್ಲ, ರಾಜ್ಯದ ಜನರದ್ದು. ಸರ್ಕಾರದ ಪ್ರತಿಯೊಂದು ನಿರ್ಧಾರವೂ ಸಂಪುಟದ ಒಟ್ಟಾರೆ ನಿರ್ಧಾರವಾಗಿರುತ್ತದೆ. ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿರುವ ಬಲಿಷ್ಠ ನಾಯಕತ್ವವನ್ನು ನೀಡುತ್ತೇವೆ” ಎಂದು ಡಿಕೆ ಶಿವಕುಮಾರ್ ಹೇಳಿದರು.






























