
ನವದೆಹಲಿ: ಜೇನುತುಪ್ಪ, ಗೋ ತುಪ್ಪ, ಖಾದ್ಯ ಎಣ್ಣೆ ಸೇರಿದಂತೆ ಹಲವು ಆಹಾರ ಉತ್ಪನ್ನಗಳ ಮೇಲೆ ‘100 ಪ್ರತಿಶತ’ ಎಂಬ ಹೇಳಿಕೆ ಬಳಸಿ ಮಾರಾಟ ಮಾಡುತ್ತಿರುವ ಡಾಬರ್ ಇಂಡಿಯಾಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಷೇಧ ಹೇರಿದೆ.
ಎಫ್ಎಸ್ಎಸ್ಎಐ ಪ್ರಕಾರ, ‘100%’ ಎಂಬ ಹೇಳಿಕೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಜಾಹೀರಾತು ಮತ್ತು ದಾವೆಗಳು) ನಿಯಮಗಳು, 2018ಕ್ಕೆ ವಿರುದ್ಧವಾಗಿವೆ. ಇಂತಹ ಪದಗಳು ಅಸ್ಪಷ್ಟವಾಗಿದ್ದು, ಗ್ರಾಹಕರನ್ನು ತಪ್ಪುದಾರಿಗೆಳೆಯುವ ಸಾಧ್ಯತೆ ಇರುವುದರಿಂದ ಅವುಗಳನ್ನು ಬಳಸಲು ಅವಕಾಶವಿಲ್ಲ ಎಂದು ತಿಳಿಸಿದೆ.
ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿರುವ ಎಫ್ಎಸ್ಎಸ್ಎಐ, ಡಾಬರ್ ಇಂಡಿಯಾದ ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ವರ್ಜಿನ್ ತೆಂಗಿನ ಎಣ್ಣೆ, ಎಳ್ಳೆಣ್ಣೆ, ಗೋ ತುಪ್ಪ, ತೆಂಗಿನ ನೀರು, ತೆಂಗಿನ ಹಾಲು ಸೇರಿದಂತೆ ಹಲವು ಉತ್ಪನ್ನಗಳಲ್ಲಿ ಇಂತಹ ಹೇಳಿಕೆಗಳನ್ನು ಬಳಸಲಾಗುತ್ತಿತ್ತು ಎಂದು ತಿಳಿಸಿದೆ.
ಕಂಪನಿಯ ವೆಬ್ಸೈಟ್ನಲ್ಲಿ ‘100% Natural’, ‘100% Pure’, ‘100% Purity Guaranteed’, ‘100% Organic’ ಹಾಗೂ ‘100% Tender Coconut Water’ ಎಂಬ ದಾವೆಗಳನ್ನು ಪ್ರದರ್ಶಿಸಲಾಗಿದ್ದು, ಇವು ನಿಯಮ ಉಲ್ಲಂಘನೆಯಾಗಿವೆ ಎಂದು ಎಫ್ಎಸ್ಎಸ್ಎಐ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾಬರ್ ಇಂಡಿಯಾ, ಎಫ್ಎಸ್ಎಸ್ಎಐನ ನೋಟಿಸ್ ಸ್ವೀಕರಿಸಿದ್ದು, ವೆಬ್ಸೈಟ್ನಲ್ಲಿರುವ ಮಾಹಿತಿಯನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದೆ.
ಇದೇ ವೇಳೆ, ಡಾಬರ್ ಹಿಮಾಲಯನ್ ಆರ್ಗ್ಯಾನಿಕ್ ಆಪಲ್ ಸೈಡರ್ ವಿನೆಗರ್ ಮತ್ತು ಡಾಬರ್ ಆರ್ಗ್ಯಾನಿಕ್ ಹನಿ ಉತ್ಪನ್ನಗಳ ಮೇಲೆ ಮಾನ್ಯ FSSAI ಸಾವಯವ ಅನುಮೋದನೆ ಇಲ್ಲದೇ ‘ಜೈವಿಕ್ ಭಾರತ್’ ಲೋಗೊ ಬಳಕೆಯು ಪತ್ತೆಯಾಗಿದೆ.

























































