
ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಇಲ್ಲಿನ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ ಯವರು ನೆರವೇರಿಸಿದರು. ಅವರು ಮಾತನಾಡುತ್ತಾ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿರುವುದನ್ನು ನಾನು ಪ್ರಥಮ ಬಾರಿಗೆ ನೋಡಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಆಧ್ಯಾತ್ಮ ವಿದ್ಯೆ ಎಲ್ಲಕ್ಕಿಂತ ದೊಡ್ಡ ವಿದ್ಯೆ. ಮಕ್ಕಳಿಗೆ ಗುರಿ ಇರಬೇಕು. ರೋಲ್ ಮಾಡೆಲ್ ಗಳಿರಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸವಿರಬೇಕು. ಅವರಲ್ಲಿ ಆತ್ಮ ಶಕ್ತಿ ತುಂಬುವ ಕೆಲಸ ನಾವು ಮಾಡಬೇಕು. ಮಕ್ಕಳಿಗೆ ಬದುಕಲು ಕಲಿಸಿ. ಸಾಧಕರ ಜೀವನ ಚರಿತ್ರೆ ಹೇಳಿ. ಮಕ್ಕಳಿಗೆ ಪ್ರಾಮಾಣಿಕತೆ, ಸತ್ಯ ಹೇಳುವುದನ್ನು ಕಲಿಸಿ. ಜೇಸಿ ಶಾಲೆಯಲ್ಲಿ ನಡೆಯುವುದು ಒಂದು ಅತ್ಯುತ್ತಮ ಕಾರ್ಯಕ್ರಮ. ಆಧ್ಯಾತ್ಮ ಎಂದರೆ ಯಾರಿಗೂ ತೊಂದರೆ ಕೊಡದೆ, ನಗುನಗುತ್ತಾ ಬಾಳುವುದು. ಈ ಶಾಲೆಗೆ ಒಳ್ಳೆಯ ಹೆಸರು ಬರಲಿ ಎಂದು ಹಾರೈಸಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಜೇಸಿ ಪದ್ಮ ಪ್ರಸಾದ್ ಜೈನ್ ರವರು, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸುವ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಪ್ರಪ್ರಥಮವಾಗಿ ಆರಂಭಿಸಿದ್ದು ಜೇಸಿ ಶಾಲೆ. ಸ್ವಾಮೀಜಿಯವರು ಹೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಶಿಕ್ಷಕರ ಜೊತೆಗೆ ಪೋಷಕರು ಭಾಗಿಯಾಗಿ ಕಲಿಸಿ. ಇದು ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಇದಕ್ಕೆ ಕಾರಣ ಜೇಸಿ ಚಿತ್ತರಂಜನ್ ಶೆಟ್ಟಿ ಯವರು. ಅವರು ಉತ್ತಮವಾಗಿ ವಿದ್ಯಾಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ನಾವೆಲ್ಲ ಅವರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸೋಣ. ಶಾಲೆಯ ಪ್ರಗತಿಗೆ ಪೋಷಕರು ಕೈಜೋಡಿಸಿ ಎಂದರು.
ಜೇಸಿಐ ಕಾರ್ಕಳದ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ ಯವರು ಚಿಕ್ಕ ಮಕ್ಕಳಿಗೆ ಅವರ ಆಸಕ್ತಿಯ ಕ್ಷೇತ್ರಗಳಿಗೆ ಪ್ರೋತ್ಸಾಹ ಕೊಡಬೇಕು. ಎಲ್ಲ ಮಕ್ಕಳು ಜೇಸಿ ಶಾಲೆಗೆ ಕೀರ್ತಿ ತರಲಿ ಎಂದರು.
ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು ಇಂದು 13ನೇ ವರ್ಷದ ಅಕ್ಷರಾಭ್ಯಾಸ. ಗುರುಗಳ ಆಶೀರ್ವಾದಕ್ಕಿಂತ ದೊಡ್ಡ ಆಶೀರ್ವಾದ ಇಲ್ಲ. ಮುಂದಿನ ವಿದ್ಯಾಭ್ಯಾಸಕ್ಕೆ ಶಾರದೆಯ ಅನುಗ್ರಹ ಆಗುತ್ತದೆ. ನಮ್ಮ ತಂದೆ -ತಾಯಿ, ಶಿಕ್ಷಕ, ಸಮಾಜ ಮತ್ತು ಪ್ರಕೃತಿಯೊಂದಿಗೆ ಹೇಗಿರಬೇಕೆಂದು ತಿಳಿದಾಗ ನಾವು ತೃಪ್ತಿಯಿಂದ ಸುಖವಾಗಿರಲು ಆಗುತ್ತದೆ.
ಭಗವದ್ಗೀತೆ ಧರ್ಮಕ್ಕೆ ಸೇರಿದಲ್ಲ. ಮನುಷ್ಯ ಹೇಗೆ ಬದುಕಬೇಕೆಂಬುದನ್ನು ತಿಳಿಸುತ್ತದೆ. ಸಣ್ಣ ನೋವುಗಳನ್ನು ಎದುರಿಸಲು ಮಕ್ಕಳಿಗೆ ಅಭ್ಯಾಸ ಮಾಡಿ. ಮುಂದೆ ದೊಡ್ಡ ಸವಾಲುಗಳನ್ನು ಎದುರಿಸುತ್ತಾರೆ. ನಿಮ್ಮ ಮಗುವಿನ ಬದುಕಿನ ಪಾಠ ಕಲಿಸುವಂತಹ ಶಾಲೆಯೇ ದೊಡ್ಡ ಶಾಲೆ. ಮಗು ಜೀವನದ ಗುರಿ ಕಂಡು ಕೊಂಡಾಗ ಸಾಧನೆ ತನ್ನಿಂತಾನೆ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಡಾ. ಶಂಕರನ್ ಪಿ ನಂಬೂಧರಿ ರವರು, ಶಾಲಾ ಆಡಳಿತ ಅಧಿಕಾರಿ ಶ್ರೀ ಪ್ರಣಿತ್ ರವರು, ಶ್ರೀಮತಿ ವಂದನಾ ರೈ ಯವರು ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ವಂದನಾ ರೈ ಯವರು ನಿರ್ವಹಿಸಿದರು. ಶ್ರೀಮತಿ ಪವಿತ್ರರವರು ಸ್ವಾಗತಿಸಿದರು. ಶ್ರೀಮತಿ ಹರಿನಾಕ್ಷಿ ಯವರು ವಂದಿಸಿದರು, ಶ್ರೀಮತಿ ದೀಕ್ಷಿತ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

































