9 ಮಂದಿ ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ

ಶ್ರೀನಗರ: ಕಳೆದ ಕೆಲ ದಿನಗಳ ಹಿಂದೆ ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡು ಸಾವು ನೋವು ಉಂಟಾಗಿದ್ದು ಅದರ ಛಾಯೆ ಮಾಸುವ ಮುನ್ನವೇ ಮತ್ತೇ ಇದೀಗ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ.
ಶುಕ್ರವಾರ ತಡರಾತ್ರಿ 11:22ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈವರೆಗೆ ಭಾರೀ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಭೀಕರ ಸ್ಫೋಟ ಶಬ್ಧಕ್ಕೆ ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದು ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳು ಹಾನಿಗೊಳಗಾದವು. ಜೊತೆಗೆ ಮಾನವ ದೇಹದ ಅವಶೇಷಗಳು ಸುಮಾರು 300 ಅಡಿ ದೂರದ ವರೆಗೆ ಚದುರಿತ್ತು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಠಾಣೆಯಲ್ಲೇ ಸಂಗ್ರಹಿಸಲಾಗಿದ್ದ ಸುಮಾರು 360 ಕಿಗ್ರಾಂ ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಕ ವಸ್ತುಗಳನ್ನ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸೀಲ್ ಮಾಡುವಾಗ ಸ್ಫೋಟಗೊಂಡಿರಬಹುದು ಎಂದು ಊಹಿಸಲಾಗಿದ್ದು 2ನೇಯದಾಗಿ ಭಯೋತ್ಪಾದಕ ಕೃತ್ಯ ಎಂದು ಶಂಕಿಸಲಾಗಿದೆ. ಪೊಲೀಸ್ ಠಾಣೆ ಆವರಣದಲ್ಲಿ ಜಪ್ತಿ ಮಾಡಿ ನಿಲ್ಲಿಸಿದ್ದ ಕಾರಿನಲ್ಲಿ ಐಇಡಿ ಇರಿಸಲಾಗಿದ್ದು ಇದರಲ್ಲಿ ಅಮೋನಿಯಂ ನೈಟ್ರೇಟ್ ಇದ್ದ ಕಾರಣ ಸ್ಫೋಟದ ಪ್ರಮಾಣ ದೊಡ್ಡಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೇ ಜೈಶ್ ಎ ಮೊಹಮ್ಮದ್ನ ಮುಖವಾಣಿ ಪಿಎಎಫ್ಎಫ್ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಸದ್ಯ ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯು ಐಇಡಿ (IED) ಪಿತೂರಿ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ 2 ಆಯಾಮಗಳಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿದೆ.






