
ನವದೆಹಲಿ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು Gen-Z ಯುವಕರನ್ನು ಉದ್ದೇಶಿಸಿ “ಜನರೇಷನ್ ಗಟರ್” ಎಂದು ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ನಡುವೆ, ಸಿಜೆಪಿ (CJP) ಕೂಡ ಅವರ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಪ್ರತಿಭಟನೆಯ ವಿಡಿಯೊಗಳನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ತಮ್ಮ ಜೀವನದಲ್ಲಿ ಇಷ್ಟು ಅಸಭ್ಯ ವರ್ತನೆಯನ್ನು ನೋಡಿಲ್ಲ. Gen-Z ಪ್ರತಿಭಟನೆಯ ರೀಲ್ಸ್‌ಗಳು ಅಸಹ್ಯ ಹುಟ್ಟಿಸುವಂತಿದ್ದು, ಅವರ ಭಾಷೆ ಮತ್ತು ವರ್ತನೆ ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಟೀಕಿಸಿ, “ಇವರನ್ನು ಯಾರು ಹೇಗೆ ಬೆಳೆಸಿದ್ದಾರೆ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಕಂಗನಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, Gen-Z ಅಥವಾ Gen Alpha ಯುವಕರನ್ನು ಬಿಟ್ಟು, ಅವರದೇ ಪಕ್ಷದ ನಾಯಕರು ಕೂಡ ಕಂಗನಾ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಿರುಗೇಟು ನೀಡಿದರು.
ಹಿಮಾಚಲ ಪ್ರದೇಶದ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಸಂಸದರ ಕೆಲಸದ ಬಗ್ಗೆ ಕಂಗನಾ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ದಾಸ್ ಸಂಸದೆಯ ಜವಾಬ್ದಾರಿಯ ಗಂಭೀರತೆ ಅರಿಯುವ ಮೊದಲು ಆ ಕೆಲಸ ಸುಲಭ ಎಂದು ಭಾವಿಸಿದ್ದಾಗಿ ಕಂಗನಾ ಹೇಳಿದ್ದರು. ಅದೇ ಅವರ ರಾಜಕೀಯ ಗಂಭೀರತೆಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.


















































