
ಬೆಂಗಳೂರು: ರಾಜ್ಯದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಕರೆಗಳಿಗೆ ಸರ್ಕಾರಿ ಅಧಿಕಾರಿಗಳು ಸ್ಪಂದಿಸದೆ ಇರುವ ಬಗ್ಗೆ ಗಂಭೀರ ಸೂಚನೆ ನೀಡಿರುವ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸುತ್ತೋಲೆ ಹೊರಡಿಸಿದ್ದು, ಇನ್ನು ಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಎಂಎಲ್ಎ ಹಾಗೂ ಎಂಎಲ್ಸಿ ಗಳ ದೂರವಾಣಿ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಯಾವುದೇ ಕಾರಣದಿಂದ ಕರೆ ಸ್ವೀಕರಿಸಲಾಗದಿದ್ದರೆ, ನಂತರ ಮರಳಿ ಕರೆ ಮಾಡಿ ಮಾತನಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವುದು ಸಹಜವಾಗಿದ್ದು, ಕೆಲವು ಅಧಿಕಾರಿಗಳು ಕರೆಗಳನ್ನು ಸ್ವೀಕರಿಸದೆ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ವಿಧಾನಪರಿಷತ್ ಸಭಾಪತಿಗಳು 16-12-2025 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಅಧಿಕಾರಿಗಳು ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಹೊಂದಿರಬೇಕು. ಅವರು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸುವುದು ಅಥವಾ ಕರ್ತವ್ಯ ಮುಗಿದ ಬಳಿಕ ಮರು ಕರೆ ಮಾಡುವ ಮೂಲಕ ಸಮಸ್ಯೆಗಳ ಬಗ್ಗೆ ಸಮರ್ಪಕವಾಗಿ ಪ್ರತಿಕ್ರಿಯಿಸಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.



















