
ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇಂದು ಅಪರೂಪದ ಹಾಗೂ ನಾಟಕೀಯ ಬೆಳವಣಿಗೆ ಕಂಡುಬಂದಿದ್ದು ಸಂವಿಧಾನಾನುಸಾರ ಸದನವನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ ರಾಜ್ಯಪಾಲ ಥಾವರ್ಚಂದ್ ಗೆಹಲೋಟ್ ಅವರು, ಸುದೀರ್ಘ ಭಾಷಣವನ್ನು ಓದದೇ ಕೇವಲ ಒಂದೇ ಸಾಲಿನ ಮಾತು ಹೇಳಿ ಸದನದಿಂದ ಹೊರನಡೆದರು.
ಅಧಿವೇಶನ ಆರಂಭದಲ್ಲಿ ಸರ್ಕಾರದ ಸಾಧನೆಗಳನ್ನೊಳಗೊಂಡ ಭಾಷಣ ನಿರೀಕ್ಷಿಸಲಾಗಿತ್ತು. ಆದರೆ ರಾಜ್ಯಪಾಲರು, “ನನ್ನ ಸರ್ಕಾರದ ಸಾಮಾಜಿಕ ಕಾರ್ಯಗಳು ಮುಂದುವರೆಯುತ್ತವೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ಹೇಳಿ ಭಾಷಣ ಮುಕ್ತಾಯಗೊಳಿಸಿದರು. ಇದರಿಂದ ಆಡಳಿತ ಪಕ್ಷದ ಸದಸ್ಯರು ಅಚ್ಚರಿಗೊಂಡಿದ್ದು ರಾಜ್ಯಪಾಲರು ಹೊರನಡೆಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ರಾಜ್ಯಪಾಲರ ಜೊತೆ ತೆರಳಿ ಅವರನ್ನು ಮನವೊಲಿಸಲು ಯತ್ನಿಸಿದರು. ಆದರೆ ಚರ್ಚೆಯ ಬಳಿಕವೂ ರಾಜ್ಯಪಾಲರು ನಿರ್ಗಮಿಸಿದರು.
ಸಾಮಾನ್ಯವಾಗಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಓದುವುದು ಸಂಪ್ರದಾಯ. ಆದರೆ ಇಂದು ಅದನ್ನು ಪಾಲಿಸದೆ ತೆರಳಿರುವುದು ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಉದ್ವಿಗ್ನತೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.








