ಆರ್ಸಿಬಿ, ಕೆಎಸ್ಸಿಎ ಮತ್ತು ಡಿಎನ್ಎ ಸಂಸ್ಥೆಗಳು ಘಟನೆಗೆ ನೇರ ಹೊಣೆ..!

ಬೆಂಗಳೂರು: ಚಾರ್ಜ್ ಶೀಟ್ ಸಲ್ಲಿಕೆಗೆ ಹೈಕೋರ್ಟ್ನಿಂದ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆ ಸಿಐಡಿ ಅಧಿಕಾರಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿಸಿ ಸುಮಾರು 2,200ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿದ್ದಾರೆ.
ನೂರಾರು ಪ್ರತ್ಯಕ್ಷ ಸಾಕ್ಷಿ, ಸಿಸಿಟಿವಿ, ಗಾಯಾಳುಗಳ ಹೇಳಿಕೆ ದಾಖಲಿಸಲಾಗಿದ್ದು, RCB ಜೊತೆ KSCA, DNA ಘಟನೆಗೆ ನೇರ ಕಾರಣ ಅನ್ನೋದು ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಚಾರ್ಜ್ ಶೀಟ್ನಲ್ಲಿ ಮೂರು ಸಂಸ್ಥೆಗಳನ್ನ ಸಿಐಡಿ ನೇರ ಹೊಣೆ ಮಾಡಿದೆ. ಸರಿಯಾದ ಪ್ಲಾನ್ ಇಲ್ಲದೆಯೇ ಕಾರ್ಯಕ್ರಮ ಆಯೋಜನೆ, ಕಾರ್ಯಕ್ರಮ ಆಯೋಜನೆಗೂ ಮುನ್ನ ಸಭೆ ಸರಿಯಾಗಿ ಮಾಡದಿರುವುದು ಸೇರಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡದೇ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರ್ಸಿಬಿ ಟಿಕೆಟ್ ಬಗ್ಗೆ ಗೊಂದಲ ಹುಟ್ಟಿಸಿದ್ದೇ, ಘಟನೆಗೆ ಮೊದಲ ಕಾರಣವಾಗಿದ್ದು ಅಲ್ಲದೇ ಡಿಎನ್ಎ ಕಡೆಯಿಂದ ಯಾವುದೇ ಸೆಕ್ಯುರಿಟಿ ಪ್ಲಾನ್ ಇರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆಯೂ ವಿಫಲವಾಗಿದ್ದು ಪೊಲೀಸರ ಜೊತೆ ಕೂಡ ಸರಿಯಾದ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜನೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ ಎನ್ನಲಾಗಿದೆ. ಎಲ್ಲಾ ಗೇಟ್ ಬಳಿಯ ಸಿಸಿಟಿವಿ ಪರಿಶೀಲನೆ, ವಿಡಿಯೋದಲ್ಲಿದ್ದವರ ಹೇಳಿಕೆ, ಪ್ರತೀ ಗೇಟ್ನ ಸೆಕ್ಯುರಿಟಿ, ಡ್ಯೂಟಿಗೆ ಹಾಜರಾಗಿದ್ದ ಪೊಲೀಸರ ಹೇಳಿಕೆ, ಗಾಯಾಳು ಹೇಳಿಕೆ, ಗಾಯಾಳುಗಳನ್ನ ಸಾಗಿಸಿದವರ ಹೇಳಿಕೆ ಸೇರಿ ನೂರಾರು ಪ್ರತ್ಯಕ್ಷ ಸಾಕ್ಷಿಗಳನ್ನೂ ತನಿಖಾ ತಂಡ ದಾಖಲಿಸಿಕೊಂಡಿದೆ.









