
ಚಿತ್ರದುರ್ಗ: ಇಲ್ಲಿನ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದ ನಂತರ, ಹಾಸನದ ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ಗಳಾದ ನವ್ಯ ಮತ್ತು ಮಾನಸ ಕಣ್ಮರೆಯಾಗಿದ್ದು ಪೋಷಕರು ಆಸ್ಪತ್ರೆಯಲ್ಲಿ ಫೋಟೋ ಹಿಡಿದು ಹುಡುಕಾಟ ನಡೆಸಿದ್ದಾರೆ.
ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ. ಮಕ್ಕಳನ್ನು ಕಾಣದೇ ಪೋಷಕರು ಕಂಗಾಲಾಗಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನಿವಾಸಿಯಾದ ನವ್ಯ ಹಾಗೂ ಚನ್ನರಾಯಪಟ್ಟಣದ ಮಾನಸ, ಇಬ್ಬರೂ ಆತ್ಮೀಯ ಗೆಳತಿಯರಾಗಿದ್ದು ಸಾಫ್ಟ್ವೇರ್ ಇಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದರು. ಉದ್ಯೋಗ ಹಾಗೂ ಜೀವನದಲ್ಲಿ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದ ಈ ಯುವತಿಯರು ಬೆಂಗಳೂರಿನಿಂದ ಬಸ್ನಲ್ಲಿ ಪ್ರಯಾಣ ಆರಂಭಿಸಿದ್ದು ಆದರೆ ಮಧ್ಯರಾತ್ರಿ ಚಿತ್ರದುರ್ಗದ ಬಳಿ ನಡೆದ ಭೀಕರ ಅಪಘಾತದ ಬಳಿಕ ನವ್ಯ ಮತ್ತು ಮಾನಸ ಅವರ ಯಾವುದೇ ಸುಳಿವು ಲಭ್ಯವಾಗದೇ ಇರುವುದರಿಂದ, ಅವರ ಪೋಷಕರು ಆತಂಕದಲ್ಲಿ ಮುಳುಗಿದ್ದಾರೆ. ಮಗಳ ಫೋಟೋ ಹಿಡಿದುಕೊಂಡೇ ಆಸ್ಪತ್ರೆಯಿಂದ ಆಸ್ಪತ್ರೆಗೆ ನವ್ಯ ತಂದೆ ಮಂಜಪ್ಪ ಅಲೆದಾಡುತ್ತಿರುವ ದೃಶ್ಯಗಳು ಎಲ್ಲರ ಕಣ್ಣಲ್ಲೂ ಕಂಬನಿ ಮಿಡಿದಿದೆ.
ಪ್ರತಿ ವಾರ್ಡ್, ಪ್ರತಿ ಬೆಡ್ ಪರಿಶೀಲಿಸುತ್ತಾ, ಗಾಯಾಳುಗಳ ಪಟ್ಟಿ ನೋಡುತ್ತಾ, ಜೀವದಾಳದಲ್ಲಿ ಒಂದಾದರೂ ಸುಳಿವು ಸಿಗಬಹುದೆಂಬ ಭರವಸೆಯೊಂದಿಗೆ ಕಣ್ಣೀರಿಡುತ್ತಿದ್ದಾರೆ. ನವ್ಯ ಜೀವನದ ಹೊಸ ಅಧ್ಯಾಯಕ್ಕೆ ಸಿದ್ಧವಾಗುತ್ತಿದ್ದಳು. ಇದೇ ಏಪ್ರಿಲ್ 28ರಂದು ನವ್ಯ ಮದುವೆ ನಿಗದಿಯಾಗಿತ್ತು. ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಇಂದು ಆಕೆಯ ಫೋಟೋ ಹಿಡಿದು ಆಸ್ಪತ್ರೆಗಳಲ್ಲಿ ಹುಡುಕಾಡಬೇಕಾದ ಸ್ಥಿತಿ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.





