ಉಗ್ರ ಹೋರಾಟದ ಎಚ್ಚರಿಕೆ ನೀಡಿದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಮಾಲಾಧಾರಿಗಳು

ಚಿಕ್ಕಮಗಳೂರು: ಬಾಳೆಹೊನ್ನೂರು ಕಾಲೇಜು ಹಾಗು ಚಿಕ್ಕಮಗಳೂರಿನ ಖಾಸಗಿ ಶಾಲೆಯಲ್ಲಿ ಅಯ್ಯಪ್ಪಮಾಲೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಿರಿಕ್ ನಡೆದಿದ್ದು ಇದೀಗ ಮತ್ತೆ ನಗರದ ಪ್ರಸಿದ್ಧ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ ಏಳನೇ ತರಗತಿ ವಿದ್ಯಾರ್ಥಿಗೆ ಶಾಲಾ ಪ್ರಾಂಶುಪಾಲರು ಯಾರನ್ನು ಕೇಳಿ ಮಾಲೆ ಧರಿಸಿದ್ದೀಯ ಎಂದು ಪ್ರಶ್ನಿಸಿ ಥಳಿಸಿರುವ ಘಟನೆ ನಡೆದಿದೆ.
ಶರ್ಟ್ ಒಳಗೆ ಬನಿಯನ್ ಏಕೆ ಹಾಕಿಲ್ಲ ಎಂದು ವಿಚಾರಿಸಿ ಶಬರಿಮಲೆ ಯಾತ್ರೆಗೆ ಹೋಗಲು ರಜೆ ನೀಡುವುದಿಲ್ಲ ಎಂದು ಗದರಿದ್ದು ವಿಷಯ ತಿಳಿಯುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಮತ್ತು ಮಾಲಾಧಾರಿಗಳು ಶಾಲೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆದೇಶ ಇಲ್ಲದಿದ್ದರೂ ನಿಮ್ಮ ಹಬ್ಬಕ್ಕೆ 15 ದಿನ ರಜೆ ನೀಡುವ ನೀವು ಸಂಪ್ರದಾಯದಂತೆ ಶಬರಿಮಲೆಗೆ ಹೋಗುವ ಬಾಲಕನಿಗೆ ರಜೆ ನೀಡಲು ಏಕೆ ಹಿಂದೇಟು ಹಾಕುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿರುವ ಪ್ರತಿಭಟನಾಕಾರರು ಹಿಜಾಬ್ ವಿಚಾರದಲ್ಲಿ ಕಾನೂನು ಹೇಗಿದೆಯೋ, ಇಲ್ಲಿಯೂ ಹಾಗೆಯೇ ವರ್ತಿಸಿ. ಇಲ್ಲದಿದ್ದರೆ ಸಂಸ್ಥೆ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಚರ್ಚೆಯ ಬಳಿಕ ಪ್ರಾಂಶುಪಾಲರು ಎಲ್ಲರ ಮುಂದೆ ಕ್ಷಮೆ ಯಾಚಿಸಿದ್ದು ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬಂದಿದೆ.





