
ಲಕ್ನೋ: ಇನ್ನೇನು ಚಳಿಗಾಲ ಸಮೀಪಿಸುತ್ತಿರುವುದರಿಂದ ಅಯೋಧ್ಯೆ ರಾಮಮಂದಿರದ ಬಾಲರಾಮನನ್ನು ಬೆಚ್ಚಗಿಡಲು ತಯಾರಿ ಮಾಡಲಾಗುತ್ತಿದ್ದು ನವೆಂಬರ್ 20 ರಿಂದ ಬಾಲರಾಮನಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಅಭಿಷೇಕ ಮಾಡಲಾಗುವುದು.
ನವೆಂಬರ್ 20 ರಿಂದ ಬರುವ ‘ಅಘರ್ ಕಿ ಪಂಚಮಿ’ಯಿಂದ ರಾಮಲಲ್ಲಾನಿಗೆ ದೆಹಲಿ ಮೂಲದ ವಿನ್ಯಾಸಕರು ಹೊಲಿದ ಚಾದರ, ಪಶ್ಮಿನಾ ಶಾಲಿನಿಂದ ಅಲಂಕರಿಸಿ ಹೀಟರ್ ಅಳವಡಿಕೆ ಮಾಡಿ ಮೂರ್ತಿಗೆ ಬಿಸಿ ನೀರಿನ ಅಭಿಷೇಕ ಮಾಡುವುದು. ಬಾಲರಾಮನಿಗೆ ಮೊಸರು ನೈವೇದ್ಯದ ಬದಲು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಣ ಹಣ್ಣುಗಳ ನೈವೇದ್ಯ ಇರುತ್ತದೆ. ಹವಾಮಾನ ವೈಪರೀತ್ಯದ ಸಮಯದಲ್ಲಿ ಗರ್ಭಗುಡಿಯಲ್ಲಿ ಬ್ಲೋವರ್‌ನಿಂದ ಬೆಚ್ಚಗಿನ ಗಾಳಿಯನ್ನು ಸಹ ಒದಗಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ದೇವಾಲಯದ ಟ್ರಸ್ಟ್‌ನ ವಕ್ತಾರ ಓಂಕಾರ್ ಸಿಂಗ್, ರಾಮಲಲ್ಲಾ ಬಾಲಕ. ಹೀಗಾಗಿ, ಅವನ ಆರೈಕೆ ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲದಲ್ಲಿ ಬಾಲಕ ರಾಮನಿಗೆ ವಿಶೇಷ ಗಮನ ಕೊಡಲಾಗುವುದು. ರಾಮಲಲ್ಲಾ ರಾಮಮಂದಿರದಲ್ಲಿ ರಾಜಕುಮಾರನಾಗಿ ಕುಳಿತಿದ್ದಾನೆ. ಆದ್ದರಿಂದ ಅವನ ಬಟ್ಟೆಗಳು ಅವನ ರಾಜಪ್ರಭುತ್ವಕ್ಕೆ ಹೊಂದಿಕೆಯಾಗಬೇಕು ಎಂದು ಹೇಳಿದರು.



















