ರಸ್ತೆ ಬದಿ ವಾಣಿಜ್ಯ ಚಟುವಟಿಕೆಗಳ ಮೇಲೆ ಸರ್ಕಾರದ ಕಣ್ಣುಗಾವಲು
ನಿಯಮ ರೂಪಿಸಲು ಸಮಿತಿ ರಚನೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಹೆದ್ದಾರಿ ಹಾಗೂ ಇತರ ರಸ್ತೆ ಬದಿಯ ಮನೆ-ಕಟ್ಟಡಗಳ ಗೋಡೆಗಳ ಮೇಲೆ ವಾಣಿಜ್ಯ ಜಾಹೀರಾತುಗಳನ್ನು ಬರೆಯುವುದು ಸೇರಿದಂತೆ ವಿವಿಧ ಕಾರಣಗಳಿಂದ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಆದಾಯದಲ್ಲಿ ನಷ್ಟವಾಗುತ್ತಿದ್ದು ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಮಿತಿ ರಚಿಸುವಂತೆ ಸೂಚನೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆ ಪಕ್ಕದ ಕಂದಾಯ ಭೂಮಿಗಳಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ ಗ್ರಾನೈಟ್, ಹೋಟೆಲ್, ಡಾಬಾ, ಅಂಗಡಿ ಹಾಗೂ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದರೂ ಪಂಚಾಯಿತಿಗಳಿಗೆ ಸಮರ್ಪಕ ಆದಾಯ ದೊರೆಯುತ್ತಿಲ್ಲ. ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಬೃಹತ್ ಜಾಹೀರಾತು ಫಲಕಗಳನ್ನೂ ಅಳವಡಿಸಲಾಗುತ್ತಿದೆ.
ಮನೆ ಮತ್ತು ಕಟ್ಟಡಗಳ ಗೋಡೆಗಳ ಮೇಲೂ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಈ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆದರೂ ಭೂಪರಿವರ್ತನೆ ಮಾಡಿಲ್ಲ. ಆದ್ದರಿಂದ ವರದಿ ಆಧರಿಸಿ ವಾಣಿಜ್ಯ ಚಟುವಟಿಕೆ ಹಾಗೂ ಜಾಹೀರಾತು ಪ್ರದರ್ಶನ ನಡೆಯುವ ಭೂಮಿಗೆ ಶುಲ್ಕ ವಿಧಿಸಲು ಅಗತ್ಯ ನಿಯಮ ರೂಪಿಸುವಂತೆ ಕಾರ್ಯದರ್ಶಿಗೆ ಸಚಿವರು ಲಿಖಿತ ನಿರ್ದೇಶನ ನೀಡಿದ್ದಾರೆ.






























































































































