ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸೇವಾ ಕಾರ್ಯ

ಕಾರ್ಕಳ, ಜುಲೈ 12: ಗೋ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಕಾರ್ಕಳದ ಶ್ರೀಗುರುರಾಘವೇಂದ್ರ ಮಠದ ಬಳಿಯ ಆವರಣದಲ್ಲಿ ಭಾನುವಾರ ಬೆಳಗ್ಗೆ 6.30 ರಿಂದ 8.30 ರವರೆಗೆ ನೆಪಿಯರ್ ಮೇವು ಹುಲ್ಲು ನೆಡುವ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬ್ರಿಗೇಡ್‌ನ ಸದಸ್ಯರೊಂದಿಗೆ ಸ್ಥಳೀಯ ಸಾರ್ವಜನಿಕರು ಸಹ ಉತ್ಸಾಹದಿಂದ ಭಾಗವಹಿಸಿ ಶ್ರಮದಾನ ಮಾಡಿದರು. ವಿಶೇಷವಾಗಿ ಹಲವಾರು ಯುವಕರು ಹಾಗೂ ಸಮಾಜಸೇವೆಯಲ್ಲಿ ಆಸಕ್ತಿ ಹೊಂದಿರುವ ಹೊಸ ಸದಸ್ಯರು ಸ್ವಚ್ಛ ಕಾರ್ಕಳ ಬ್ರಿಗೇಡ್‌ಗೆ ಸೇರ್ಪಡೆಗೊಂಡು ಅಭಿಯಾನದಲ್ಲಿ ಕೈಜೋಡಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಗೋಶಾಲೆಗಳಲ್ಲಿ ಗೋವುಗಳಿಗೆ ಪೌಷ್ಟಿಕ ಮೇವು ಒದಗಿಸುವ ಉದ್ದೇಶದಿಂದ ನೆಪಿಯರ್ ಮೇವು ಹುಲ್ಲು ಬೆಳೆಸಲು ಅಗತ್ಯ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಹುಲ್ಲು ನೆಡುವ ಕಾರ್ಯವನ್ನು ಹಂತ ಹಂತವಾಗಿ ವಿಸ್ತರಿಸಲು ಬ್ರಿಗೇಡ್ ಯೋಜನೆ ರೂಪಿಸಿದೆ.
ಈ ಅಭಿಯಾನವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ, ಪ್ರತಿ ಭಾನುವಾರ ಬೆಳಗ್ಗೆ 6.30 ರಿಂದ 8.30 ರವರೆಗೆ ಇದೇ ಸ್ಥಳದಲ್ಲಿ ನಿರಂತರವಾಗಿ ನಡೆಸಲು ತೀರ್ಮಾನಿಸಲಾಗಿದೆ. ಸಮಾಜಮುಖಿ ಸೇವೆ, ಗೋ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಸ್ವಚ್ಛ ಕಾರ್ಕಳ ಬ್ರಿಗೇಡ್ ಮನವಿ ಮಾಡಿದೆ.
ಈ ಮೂಲಕ ಗೋ ಸೇವೆಯ ಜೊತೆಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಬ್ರಿಗೇಡ್ ನಿರಂತರವಾಗಿ ಮುಂದುವರಿಸುತ್ತಿದೆ.











































