
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಎಸ್ ಟಿ ಹಾಗೂ ಆದಾಯ ತೆರಿಗೆ ಪಾವತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ದೊರಕುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಅಡಚಣೆಗಳನ್ನು ಈಗಾಗಲೇ ಪರಿಶೀಲಿಸಲಾಗಿದ್ದು ಉಳಿದ ಫಲಾನುಭವಿಗಳ ಸಮಸ್ಯೆಗಳನ್ನು ಶೀಘ್ರದಲ್ಲೇ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಪಿ.ಎಚ್. ಪೂಜಾರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಜಿಎಸ್ ಟಿ ಹಾಗೂ ಆದಾಯ ತೆರಿಗೆ ಸಂಬಂಧಿತ ದಾಖಲೆಗಳ ಕಾರಣದಿಂದ ಈ ಸಮಸ್ಯೆ ಉಂಟಾಗಿದ್ದು ಇದನ್ನು ಬಗೆಹರಿಸಲು ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರ ಅಥವಾ ಇಲಾಖೆಯ ತಪ್ಪಿನಿಂದ ಈ ಪರಿಸ್ಥಿತಿ ಉಂಟಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದಾರೆ. ಇವರಲ್ಲಿ ಕೆಲವರು ವ್ಯವಹಾರ ನಡೆಸುತ್ತಿರುವ ಕಾರಣ ಜಿಎಸ್ ಟಿ ಹಾಗೂ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಈಗಾಗಲೇ ಆದಾಯ ತೆರಿಗೆ ಮತ್ತು ಜಿಎಸ್ಟಿ ಕೌನ್ಸಿಲ್ ಗಮನಕ್ಕೆ ತರಲಾಗಿದೆ ಎಂದು ಸಚಿವೆ ಹೇಳಿದರು.



















