30.7 C
Udupi
Monday, March 9, 2026
spot_img
spot_img
HomeBlog"ಗಿವ್ ಟು ಗೈನ್" -ಪಡೆಯಲು ನೀಡಿರಿ

“ಗಿವ್ ಟು ಗೈನ್” -ಪಡೆಯಲು ನೀಡಿರಿ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಡಾ. ಸುಮತಿ ಪಿ

ಇಂದು ಮಾರ್ಚ್ ಎಂಟು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ.
ಅಂತರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸುವ ಮುಖ್ಯ ಉದ್ದೇಶ ಸಮಾಜವು ಕಾಳಜಿ ವಹಿಸಬೇಕಾದ ಅಥವಾ ಗಮನಿಸಬೇಕಾದ ವಿಷಯಗಳ ಬಗ್ಗೆ ಅರಿವನ್ನು ನೀಡುವುದು.
ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಾವೇನು ಮಾಡುತ್ತೇವೆ.ಒಂದಿಷ್ಟು ಸಾಧನೆ ಮಾಡಿದ ಮಹಿಳೆಯರನ್ನು (ಬೆಳಕಿಗೆ ಬಂದವರನ್ನು, ಪ್ರಚಾರದಲ್ಲಿರುವವರನ್ನು ) ಕರೆದು ,ಸಾಧನೆಯನ್ನು ಹೊಗಳಿ , ಸನ್ಮಾನಮಾಡಿ ಮಹಿಳಾ ದಿನಾಚರಣೆ ಆಚರಿಸುತ್ತೇವೆ.ಇಲ್ಲಿ ಇನ್ನಷ್ಟು ಸಾಧಕರಿಗೆ ಪ್ರೇರಣೆಯಾಗುವ ಆಶಯ.ಇಲ್ಲಿಗೆ ಇದು ಮುಗಿಯಬಾರದು. ಸನ್ಮಾನ ಸ್ವೀಕರಿಸಿದ ಮಹಿಳೆ ಮುಂದೆಂದೂ ಆ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರೆ ಮಾತ್ರ ಸನ್ಮಾನಕ್ಕೆ ಗೌರವ ಹಾಗೂ ಅರ್ಥ ಬರುತ್ತದೆ.
ಇನ್ನು ಈ ಮಹಿಳಾ ದಿನಾಚರಣೆ ಪ್ರತಿ ವರ್ಷ ವಿಶಿಷ್ಟವಾದ ಧ್ಯೇಯೋದ್ದೇಶದೊಂದಿಗೆ ಆಚರಿಸಲ್ಪಡುತ್ತದೆ .ಅಂತೆಯೇ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 2026 ರ ಥೀಮ್ ‘ಗಿವ್ ಟು ಗೇನ್’. “ಗಳಿಸಲು ನೀಡಿ” ಎಂದಾಗಿದೆ.ನಾವು ಕೊಟ್ಟಾಗ, ನಾವು ಗಳಿಸುತ್ತೇವೆ.ಹೇರಳವಾಗಿ ನೀಡುವ ಮೂಲಕ ಲಿಂಗ ಸಮಾನತೆಯನ್ನು ರೂಪಿಸಲು ಸಹಾಯ ಮಾಡೋಣ. ಎಂಬುದರೊಂದಿಗೆ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲ್ಪಡುತ್ತಿದೆ.”ಗಿವ್ ಟು ಗೇನ್” ಅಭಿಯಾನವು ಉದಾರತೆ ಮತ್ತು ಸಹಯೋಗದ ಮನಸ್ಥಿತಿಯನ್ನು ಪ್ರೋತ್ಸಾಹಿಸುತ್ತದೆ.ಅಂದರೆ ಮಹಿಳೆಯರನ್ನು ಅರ್ಥೈಸಿಕೊಂಡು ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಬೇಕು.

“ಗಳಿಸಲು ನೀಡಿ”-ಗಳಿಸಲು ನೀಡಿ ಎಂದರೆ ಮಹಿಳೆಯರಿಂದ ಏನನ್ನಾದರೂ ಗಳಿಸಬೇಕಾದರೆ,ಮಹಿಳೆಯರಿಗೆ ಸಂಪನ್ಮೂಲ, ಮಾರ್ಗದರ್ಶನ, ಮತ್ತು ಅವಕಾಶಗಳನ್ನು ನೀಡಬೇಕು .ಆ ಮೂಲಕವಾಗಿ ಸ್ತ್ರೀ ಸಮಾನತೆ ಮತ್ತು ಪ್ರಗತಿಯನ್ನು ಸಾಧಿಸಬೇಕು.

ಮಹಿಳೆ ತನ್ನ ಕುಟುಂಬದಲ್ಲಿ ಆ ಮೂಲಕ ಸಮಾಜದಲ್ಲಿ ತನ್ಮೂಲಕ ದೇಶದ ಪ್ರಗತಿಯಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತಾಳೆ. ದೇಶದ ಭವಿಷ್ಯ ಇಂದಿನ ಮಕ್ಕಳು ಮುಂದಿನ ಪ್ರಜೆಗಳಲ್ಲಿದೆ. ಇಂದಿನ ಮಕ್ಕಳನ್ನು ಭವಿಷ್ಯತ್ತಿನ ಪ್ರಜೆಗಳನ್ನಾಗಿ ರೂಪಿಸಬೇಕಾದರೆ ತಾಯಿಯ ಪಾತ್ರವನ್ನು ನಿರ್ವಹಿಸುವಂತಹ ಮಹಿಳೆಯ ಮೇಲೆ ಬಹಳ ಮುಖ್ಯವಾದ ಜವಾಬ್ದಾರಿ ಇರುತ್ತದೆ. ಹೇಗೆಂದರೆ ಮಗುವಿಗೆ “ಮನೆಯ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು”. ಹಾಗಾಗಿ ಮಗುವಿಗೆ ಜನ್ಮ ನೀಡಿ, ಹಾಲುಣಿಸಿ,ಪೋಷಿಸಿ, ಬೆಳೆಸುವ ತಾಯಿಯ ಆರೋಗ್ಯ ಚೆನ್ನಾಗಿದ್ದರೆ, ಅವಳ ಮನಸ್ಸು ಸಂತೃಪ್ತಿಯಿಂದ ಇದ್ದರೆ, ಅವಳು ಸಬಲಳಾಗಿದ್ದರೆ, ವಿದ್ಯಾವಂತೆ ಎನಿಸಿಕೊಂಡಿದ್ದರೆ ಮಾತ್ರ ಆ ತಾಯಿ ತನ್ನ ಮಗುವಿಗೆ ಬೇಕಾದ ಶಿಕ್ಷಣ, ಅರಿವು, ಜ್ಞಾನ ಆರೋಗ್ಯ, ಸಂಸ್ಕೃತಿ, ಸಂಸ್ಕಾರ ಎಲ್ಲವನ್ನು ನೀಡಬಲ್ಲಳು. ಹಾಗಾಗಿ ಸಮಾಜದಲ್ಲಿ “ಮಹಿಳೆಯರು ಅಭಿವೃದ್ಧಿ ಹೊಂದಿದಾಗ, ನಾವೆಲ್ಲರೂ ಬೆಳೆಯುತ್ತೇವೆ.”ಮಹಿಳಾ ದಿನಾಚರಣೆ- ಇದು ಕೇವಲ ಒಂದು ದಿನದ ಆಚರಣೆಯಲ್ಲ,ಬದಲಾಗಿ ನಿತ್ಯ ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ.
“ಗಿವ್ ಟು ಗೇನ್” ಅಥವಾ “ಗಳಿಸಲು ನೀಡಿ” ಎಂಬ ಪರಿಕಲ್ಪನೆಯು ಬಹಳ ವಿಶಾಲವಾದ ಅರ್ಥ ವ್ಯಾಪ್ತಿಯನ್ನು ಹೊಂದಿದೆ. ಹೆಣ್ಣಿಗೆ ನೀಡುವುದು ಎಂದರೆ ಹೆಣ್ಣು ಮಕ್ಕಳಿಗೆ ಬಾಲ್ಯದಿಂದ ತಂದೆ ತಾಯಿ, ಅಣ್ಣ ತಮ್ಮ, ಮದುವೆಯಾದ ನಂತರ ಗಂಡ, ಅತ್ತೆ ಮಾವ, ಮಕ್ಕಳು ನೀಡಬೇಕಾಗಿರುವ ಪ್ರೀತಿ,ಸಮಯ, ಸಂಪನ್ಮೂಲ, ಮತ್ತು ಜ್ಞಾನವನ್ನು ಮಹಿಳೆಯರಿಗೆ ಆಯಾಯ ಕಾಲಕ್ಕೆ ನೀಡಿ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಯತ್ನಿಸಿದರೆ, ಮಹಿಳೆಯರಿಂದ ಅದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಾಗುತ್ತದೆ.
ಇದು ಕುಟುಂಬದ ಒಳಗಾದರೆ, ಇನ್ನು ಸಾಮಾಜಿಕ ಜೀವನಕ್ಕೆ ಬಂದಾಗ,ಇದು ಗಂಡಿನಂತೆ ಹೆಣ್ಣಿಗೂ ಸಮಾನ ವೇತನ, ಶಿಕ್ಷಣ, ಮತ್ತು ಆರೋಗ್ಯ ಹಕ್ಕುಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದು ಸಮಾನತೆಯನ್ನು ಸಾಧಿಸುವುದು.
ಮಹಿಳೆಯರಿಗೆ ಕೊಡಬೇಕಾದುದನ್ನು ಸಮಯಕ್ಕೆ ಸರಿಯಾಗಿ ನಾವು ಕೊಟ್ಟಾಗ ಮಹಿಳೆಯರಿಂದಲೂ ನಾವು ಪಡೆದುಕೊಳ್ಳಬಹುದು. ನಾವು ಮಹಿಳೆಯರಿಂದ ಪ್ರೀತಿ ಗೌರವವನ್ನು ಬಯಸಬೇಕಾದರೆ ಅವಳಿಗೂ ಪ್ರೀತಿ ಗೌರವವನ್ನು ನೀಡಲೇಬೇಕಾಗುತ್ತದೆ. ಕೊಟ್ಟು ಪಡೆದುಕೊಳ್ಳುವುದು ಧರ್ಮವಲ್ಲವೇ. ಇದರ ಅರ್ಥ ಮಹಿಳಾ ಸಬಲೀಕರಣವನ್ನು ಅಥವಾ ಸಮಾನತೆಯನ್ನು ಸಾಧಿಸಬೇಕಾದರೆ ಕೇವಲ ಮಾತಿನಲ್ಲಿ ಹೇಳಿದರೆ ಅಥವಾ ಕಾನೂನುಗಳನ್ನು ರೂಪಿಸಿದರೆ ಸಾಧ್ಯವಾಗದು. ಮಹಿಳೆಯರಿಗೆ ಬೆಂಬಲ ಸಿಗಬೇಕು. ಮಹಿಳೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ,ಮಾನಸಿಕವಾಗಿ ಬೆಂಬಲ ಸಿಕ್ಕಿದರೆ, ಅವಕಾಶಗಳನ್ನು ನೀಡಿದರೆ, ಅವಳು ತನ್ನ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಂಡು ಮಕ್ಕಳಲ್ಲಿ ಹಾಗೂ ಆ ಮೂಲಕ ಮಕ್ಕಳನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ಶಕ್ತಳಾಗುತ್ತಾಳೆ.

“ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀಯೊಬ್ಬಳಿರುತ್ತಾಳೆ” ಎಂಬುದನ್ನು ನಾವು ಬಹಳ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಇದರ ಅರ್ಥ ಒಂದು ಕುಟುಂಬದ ಪ್ರಗತಿಯಾಗಲಿ ಅಥವಾ ಸಮಾಜದ ಪ್ರಗತಿಯಾಗಲಿ ಅದು ಅಲ್ಲಿಯ ಮಹಿಳೆಯರ ಸ್ಥಿತಿಗತಿಯನ್ನು,ಅವರ ವ್ಯಕ್ತಿತ್ವವನ್ನು,ಮಾನಸಿಕ ಧೈರ್ಯ, ಸ್ಥೈರ್ಯವನ್ನು ಅವಲಂಬಿಸಿರುತ್ತದೆ. “ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ” ಎಂಬ ಮಾತೊಂದಿದೆ. ಇಲ್ಲಿ ಕೂಡ ಹೆಣ್ಣನ್ನು ಒಲಿಸಿಕೊಳ್ಳಬೇಕಾದರೆ ಅವಳಿಗೆ ಅಗತ್ಯವಾಗಿ ನೀಡಬೇಕಾದುದನ್ನು ನೀಡಲೇಬೇಕು ಇಲ್ಲವೆಂದಲ್ಲಿ ಅವಳು ಮಾರಿಯಾಗುತ್ತಾಳೆ. ಮಾರಿಯಾದರೆ ಸರ್ವನಾಶ ಖಂಡಿತ. ಹಾಗಾಗಿ ಒಂದು ಕುಟುಂಬದ ಉದ್ಧಾರ ಆ ಕುಟುಂಬದ ಮಹಿಳೆಯನ್ನು ಅವಲಂಬಿಸಿರುತ್ತದೆ. ಆ ಮಹಿಳೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಶಿಕ್ಷಣವನ್ನು ಪಡೆದಿರುವವಳಾಗಿದ್ದರೆ ಆ ಮನೆಯಲ್ಲಿ ಕೂಡ ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವಂತೆ ಅವಳು ಮಾಡುತ್ತಾಳೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾದರೆ ತಾಯಿಗೂ ಉತ್ತಮ ಸಂಸ್ಕಾರ ಇರಬೇಕಾಗುತ್ತದೆ ಅಂದರೆ ಅವಳಿಂದ ಪಡೆಯಬೇಕಾದರೆ ನಾವು ಅವಳಿಗೂ ಕೊಡಬೇಕಾಗುತ್ತದೆ.

ಮಹಿಳೆಗೆ ಅಗತ್ಯವಾಗಿ ಕೊಡಬೇಕಾದ ಜ್ಞಾನ, ಮೂಲಸೌಕರ್ಯ, ಮಾನಸಿಕ ಬೆಂಬಲ, ಧೈರ್ಯ , ಸ್ಥೈರ್ಯ ಶಿಕ್ಷಣ, ತರಬೇತಿ, ಮಾರ್ಗದರ್ಶನ ಅಥವಾ ಅವಳಿಗೇ ಒಂದಿಷ್ಟು ಸಮಯ ನೀಡುವುದರ ಮೂಲಕ ಮಹಿಳೆಯರ ಪ್ರಗತಿಗೆ ಕೊಡುಗೆ ನೀಡುತ್ತ, ಹೆಚ್ಚು ಬೆಂಬಲ ನೀಡುವ ಮತ್ತು ಪರಸ್ಪರ ಸಂಬಂಧ ಹೊಂದಿರುವ ಜಗತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

“ಗಳಿಸಲು ನೀಡಿ”ಇಲ್ಲಿ ಹೆಣ್ಣಿನಿಂದ ಗಳಿಸಬೇಕಾದರೆ ಏನನ್ನು ಅವಳಿಗೆ ನೀಡಬೇಕು ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ ನನ್ನ ಮನಸ್ಸಿಗೆ ಹೊಳೆದ ಮೊದಲ ವಿಚಾರವೆಂದರೆ ಗೌರವವನ್ನು ನೀಡಬೇಕು. ಇಂದಿನ ಸಮಾಜದಲ್ಲಿ ಸ್ತ್ರೀ ಪುರುಷರು ಸಮಾನರು, ಲಿಂಗಭೇದವಿಲ್ಲ ಎಂದು ಎಷ್ಟು ಕೂಗಾಡಿದರೂ, ನಿಜ ಜೀವನದಲ್ಲಿ ಸ್ತ್ರೀ ಇನ್ನೂ ಕೂಡ ಪುರುಷನ ನಂತರದ ಸ್ಥಾನದಲ್ಲಿಯೇ ಕಾಣುತ್ತಾಳೆ.ಸ್ತ್ರೀ ಅಬಲೆ ಎನ್ನುವ ಭಾವನೆ ಮನಸ್ಸಿನಾಳದಲ್ಲಿ ಇನ್ನು ಹಾಗೆಯೇ ಇದೆ. ಇಲ್ಲಿ ಕೆಲವು ಮಹಿಳೆಯರು ಕೂಡ ಆ ಭಾವನೆಗೆ ಹೊರತಾಗಿಲ್ಲ.” ಅದು ನಮ್ಮಿಂದಾಗದು ಅದನ್ನು ಗಂಡಸರೇ ಮಾಡಲಿ” ಎನ್ನುವ ಮಾತನ್ನು ನಾವು ಮಹಿಳೆಯರಿಂದ ಕೇಳುತ್ತೇವೆ. ನಮ್ಮಿಂದೇಕೆ ಆಗದು?. ಅದನ್ನು ಜೊತೆ ಸೇರಿ ಮಾಡೋಣ.ಗಂಡು-ಹೆಣ್ಣು ಎನ್ನುವ ಭೇದ ಬೇಡ. ಯಾವಾಗ ಹೆಣ್ಣಿಗೂ ಗಂಡಿಗೂ “ನಾವು ಜೊತೆಯಲ್ಲಿ ಸೇರಿ ಮಾಡೋಣ” ಎನ್ನುವಂತಹ ಭಾವನೆ ಮನದಾಳದಲ್ಲಿ ಚಿಮ್ಮುತ್ತದೊ, ಆಗ ಖಂಡಿತ ಹೆಣ್ಣು -ಗಂಡು ಸಮಾನತೆಯ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ಯಾರ ತುಳಿತಕ್ಕೆ ಯಾರೂ ಕಾರಣವಲ್ಲ. ಮಹಿಳೆಯರು ತುಳಿತಕ್ಕೆ ಒಳಗಾದಾಗ ನಾವು ತುಳಿತಕ್ಕೆ ಒಳಗಾಗುತ್ತಿದ್ದೇವೆ ಎಂಬುದನ್ನು ಅರಿತು ತುಳಿಯುವುದು ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಾಗ ಪರಸ್ಪರ ಹೊಂದಾಣಿಕೆ ಸಾಧ್ಯವಾಗಬಹುದೇನೋ.

ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕಾದರೆ ಅವರಿಗೆ ಅರಿವು ನೀಡಬೇಕು. ಅಂತಹ ಅರಿವು ಬರುವುದು ಶಿಕ್ಷಣದಿಂದ. ಉತ್ತಮ ಶಿಕ್ಷಣ ಮಹಿಳೆಯರಿಗೂ ಸಿಗುವಂತಾಗಬೇಕು.ಇನ್ನೂ ಸಮಾಜದಲ್ಲಿ ಮಹಿಳೆ ದೌರ್ಜನ್ಯಕ್ಕೆ ಒಳಗಾದಾಗ ಅವಳು ಕಾನೂನಿನ ನೆರವಿಗೆ ಹೋಗಬೇಕಾಗುವ ಪರಿಸ್ಥಿತಿ ಬರುತ್ತದೆ ವಿನಃ ಅವಳಿಗೆ ಅಥವಾ ಅವಳ ಭಾವನೆಗೆ ಧ್ವನಿ ಕೊಡುವವರು ಬಹಳ ಕಡಿಮೆ. ಕಷ್ಟವನ್ನು ಅನುಭವಿಸುವಾಗ ಮಹಿಳೆಯರಿಗೆ ಮಾನಸಿಕ ಬೆಂಬಲ ನೀಡಿದರೆ ಅವರು ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಆ ಕಷ್ಟದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಅಂತೆಯೇ ಸಮಾನತೆಯನ್ನು ಸಾಧಿಸಬೇಕಾದರೆ ಹೆಣ್ಣಿಗೆ ಗಂಡಸರ ಬೆಂಬಲ ಬೇಕಾಗುತ್ತದೆ.

ಹೆಣ್ಣಿನ ಆರೋಗ್ಯ ಬಹಳ ಮುಖ್ಯ. ಹೆಣ್ಣಿಗೆ ಆರೋಗ್ಯವಿದ್ದರೆ ಮಾತ್ರ ಆಕೆ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಮಹಿಳೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಸಾಕಷ್ಟು ಬೆಂಬಲ ನೀಡಬೇಕಾಗುತ್ತದೆ
ಜೊತೆಗೆ ಹೆಣ್ಣಿಗೆ ಸಾಕಷ್ಟು ಅವಕಾಶಗಳನ್ನು ನೀಡುವುದರ ಮೂಲಕ ಅವಳು ಸಮಾನತೆಯನ್ನು ಸಾಧಿಸಲು ನೆರವಾಗಬಹುದು. ಹಾಗಾಗಿ “ಗಳಿಸಲು ನೀಡಿ” ಎಂಬ ಪರಿಕಲ್ಪನೆ ಬಹಳ ವಿಶಾಲವಾಗಿದೆ. ಅದರರ್ಥವನ್ನು ಎರಡು ಮಾತಿನಲ್ಲಿ ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವುದು ಪುರುಷರಂತೆ ಮಹಿಳೆಯರು ಕೂಡ ಮುಖ್ಯವಾಹಿನಿಗೆ ಬರಬೇಕು. ಪುರುಷರಷ್ಟೇ ಮಹಿಳೆಯರು ಪಾಲು ಪಡೆಯಬೇಕು ಎಂಬುದಲ್ಲವೇ.
“ಗಳಿಸಲು ನೀಡಿ” ಎಂಬುದರರ್ಥ ಹೆಣ್ಣಿನಿಂದ ಗಳಿಸಬೇಕಾದರೆ ಹೆಣ್ಣಿಗೆ ನೀಡಬೇಕು. “ಬಿತ್ತಿದಂತೆ ಬೆಳೆ” ಎಂಬ ಗಾದೆ ಮಾತಿನಂತೆ ಹೆಣ್ಣಿಗೆ ನಾವು ಏನನ್ನು ಕೊಡುತ್ತೇವೆಯೋ ಅದೇ ಸಿಗುವುದು.
ಮಹಿಳಾ ಸಬಲೀಕರಣ, ಲಿಂಗ ಸಮಾನತೆಯು ಪರಸ್ಪರ ಬೆಂಬಲವನ್ನು ಉತ್ತೇಜಿಸುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರ ಸಾಧನೆ, ತ್ಯಾಗ ಮತ್ತು ಧೈರ್ಯವನ್ನು ಗೌರವಿಸಿ, ಆಕೆಗೆ ಗೌರವ, ಆತ್ಮವಿಶ್ವಾಸ ಹಾಗೂ ಸಮಾನ ಅವಕಾಶಗಳನ್ನು ನೀಡುವ ಸಂದೇಶಗಳನ್ನು ಹಂಚಿಕೊಳ್ಳಬೇಕು.
ಬದುಕಿನ ಪ್ರತಿ ಹಂತದಲ್ಲೂ ಶಕ್ತಿ, ಧೈರ್ಯ ಮತ್ತು ಪ್ರೀತಿಯನ್ನು ಮಹಿಳೆಗೆ ತುಂಬಿದರೆ, ಅವಳು ಅದನ್ನು ತನ್ನ ಕುಟುಂಬದ ಸದಸ್ಯರಿಗೆ, ಆ ಮೂಲಕ ಸಮಾಜಕ್ಕೆ ನೀಡಿ, ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಕೈಜೋಡಿಸುತ್ತಾಳೆ. ಮಹಿಳೆ ಎಂದರೆ ಕೇವಲ ಶಕ್ತಿಯಲ್ಲ, ಅವಳು ಜಗತ್ತಿಗೆ ಬೆಳಕು. ಮನೆಯ ಮಗಳಾಗಿ, ತಾಯಿಯಾಗಿ, ಅಕ್ಕ-ತಂಗಿಯಾಗಿ ಎಲ್ಲರ ಬದುಕನ್ನು ಬೆಳಗಿಸುವ ಆಕೆಗೆ ಗೌರವ ನೀಡಲೇಬೇಕು.

ಮಹಿಳಾ ದಿನದ ಥೀಮ್ “ಗಿವ್ ಟು ಗೇನ್” ಅಂದರೆ ಎಲ್ಲರೂ ಒಟ್ಟಾಗಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವಂತಹ ಸಮಾಜ ಯಶಸ್ವಿಯಾಗುತ್ತದೆ. ಮಹಿಳೆಯರು
ಬಲವಾದ ಮತ್ತು ಅದ್ಭುತ ಇಚ್ಛಾಶಕ್ತಿಯಿಂದ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾ, ಸಮಾಜಕ್ಕೆ ಸ್ಪೂರ್ತಿಯಾಗಿ ನಿಂತು ಗಂಡು-ಹೆಣ್ಣುಪರಸ್ಪರ ಬೆಂಬಲ ಮತ್ತು ಉದಾರತೆಯಿಂದ ಲಿಂಗ ಸಮಾನತೆ ಸಾಧಿಸಬೇಕಾಗಿದೆ.
‘ಗಿವ್ ಟು ಗೇನ್’ ನಾವು ಕೊಟ್ಟಾಗ, ನಾವು ಗಳಿಸುತ್ತೇವೆ. ಒಟ್ಟಿನಲ್ಲಿ ಹೇಳುವುದಾದರೆ, ಅಗತ್ಯವಾಗಿ ನೀಡಬೇಕಾದುದನ್ನು ನೀಡುವ ಮೂಲಕ ಲಿಂಗ ಸಮಾನತೆಯನ್ನು ರೂಪಿಸಬೇಕು.ಆ ಮೂಲಕ ಸಮೃದ್ಧ ಸಮಾಜವನ್ನು ಕಟ್ಟಬೇಕು.ಒಬ್ಬ ಹೆಣ್ಣು ಮಗಳು ಬದುಕಿನಲ್ಲಿ ಯಶಸ್ವಿಯಾದರೆ, ಇಡೀ ಕುಟುಂಬ ಮತ್ತು ಸಮಾಜ ಯಶಸ್ವಿಯಾಗಲು ಸಾಧ್ಯ.

ಸಮಾಜದ ಎಲ್ಲಾ ಹೆಣ್ಣು ಮಕ್ಕಳಿಗೂ ಶುಭವಾಗಲಿ ಎಂಬ ಹಾರೈಕೆಯೊಂದಿಗೆ—-

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page