
ಬೆಂಗಳೂರು : ಸರ್ಕಾರವು ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈ ಹಿಂದೆ ಅ.7 ರವರೆಗೆ ಗಡುವು ನಿಗದಿ ಮಾಡಿದ್ದು ಆದರೆ ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಗಡುವನ್ನು ಐದು ದಿನಗಳ ಕಾಲ ಅಂದರೆ ಅ.12ರ ವರೆಗೆ ವಿಸ್ತರಿಸಿ ಆದೇಶ ನೀಡಿದೆ.
ಅ.6ರವರೆಗೆ ಜಿಬಿಎ ಹೊರತುಪಡಿಸಿ 1.15 ಕೋಟಿ ಕುಟುಂಬಗಳ ಅಂದರೆ ಶೇ.80.39ರಷ್ಟು ಗಣತಿಯಷ್ಟೇ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ತೀವ್ರ ಆಗ್ರಹ ವ್ಯಕ್ತವಾದ ಬೆನ್ನಲ್ಲೇ ಸಮೀಕ್ಷೆಯ ಗಡುವನ್ನು ಅ.12 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಹಿನ್ನೆಲೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ತರಗತಿಗಳ ಸಮಯವನ್ನೂ ಬದಲಿಸಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಸೂಚನೆ ಮೇರೆಗೆ ಈ ಕುರಿತು ಮಾಹಿತಿ ನೀಡಿದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅ.8 ರಿಂದ ಅ.12 ರವರೆಗೆ ಶಾಲಾ ತರಗತಿಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿರ್ವಹಿಸಬೇಕು. ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯ ನಿರ್ವಹಿಸುವುದು. ಸಮೀಕ್ಷೆಯನ್ನು ರಜಾ ದಿನಗಳಲ್ಲೂ ಕೈಗೊಂಡು ಅ.12ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.






















































