
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದು ಇದೀಗ ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಡಿಸಿಎಂ ಡಿಕೆಶಿ ನಾಯಕತ್ವ ಬದಲಾವಣೆ ವಿಚಾರವಾಗಿ ಯಾರು ದಣಿವಾಗೋದು ಬೇಡ. ಕ್ರಾಂತಿ ಬಗ್ಗೆ ತಾವು ಹಾಗೂ ಸಿಎಂ ಮಾತಾಡಿದರಷ್ಟೇ ಅಧಿಕೃತ. ಅದಕ್ಕಷ್ಟೇ ಬೆಲೆ. ನಾವಿಬ್ರು ಏನು ಮಾತಾಡಿಕೊಂಡಿದ್ದೇವೆಯೋ ಅದರಂತೆ ನಡೆದುಕೊಳ್ತೇವೆ ಅಂತ ಡಿಕೆಶಿ ಗುಡುಗಿದ್ದಾರೆ.
ಈ ನಡುವೆ ಕಾಂಗ್ರೆಸ್‌ನಲ್ಲಿ ನಾಯಕರ ದೆಹಲಿ ಭೇಟಿ ಪರ್ವ ಮುಂದುವರೆದಿದ್ದು ಡಿಕೆಶಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ದೆಹಲಿ ಭೇಟಿ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿಯವರೂ ದೆಹಲಿ ಫ್ಲೈಟ್ ಹತ್ತುತ್ತಿದ್ದಾರೆ. ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿರೋ ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ, ಪಕ್ಷದ ವಿದ್ಯಮಾನಗಳ ಕುರಿತು ಸತೀಶ್ ಜಾರಕಿಹೊಳಿ ಖರ್ಗೆಯವರ ಜೊತೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಅವರು ಅವರ ಕೆಲಸಕ್ಕೆ ಹೋಗುತ್ತಿದ್ದಾರೆ. ಇದೇ 5, 6ಕ್ಕೆ ನಾನೂ ಬಿಹಾರ ಹೋಗುತ್ತಿದ್ದೇನೆ. ಸೆಂಟ್ರಲ್ ಮಿನಿಸ್ಟರ್ ಸಭೆ ಕರೆದಿದ್ದಾರೆ. ಇನ್ನೊಂದಿನ ಕಾವೇರಿ ಕೇಸ್ ಇದೆ, ಮತ್ತೊಂದಿನ ನನ್ನದೊಂದು ಬುಕ್ ರಿಲೀಸ್ ಕಾರ್ಯಕ್ರಮ ಇದೆ. ದೆಹಲಿಗೆ ಹೋದ್ರೆ ನಾವು ರಾಜಕೀಯಕ್ಕಾಗಿಯೇ ಹೋಗುತ್ತಿದ್ದೇನೆ ಅಂತ ಯಾಕೆ ಅಂದುಕೊಳ್ಳುತ್ತೀರಿ? ಸತೀಶ್ ಅವರು ಹೋಗೋದಾದರೆ ಅವರು ಹೋಗ್ಲಿ ಬಿಡಿ ಎಂದು ಹೇಳಿದರು.






















































