
ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಜೋಸೆಫ್ ಅವರು ಇಂದು ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅವರು ಆಗಮಿಸಲಿದ್ದು, ದೇವಳದ ವತಿಯಿಂದ ಸೂಕ್ತ ಸ್ವಾಗತಕ್ಕೆ ಸಿದ್ಧತೆ ಮಾಡಲಾಗಿದೆ ಎಂದು ಅರ್ಚಕ ನಿತ್ಯಾನಂದ ಅಡಿಗ ತಿಳಿಸಿದ್ದಾರೆ.
ವಿಜಯ್ ಭೇಟಿ ಹಿನ್ನೆಲೆಯಲ್ಲಿ ಅರ್ಚಕರು ಹಾಗೂ ಸಿಬ್ಬಂದಿಗೆ ಮೌಖಿಕ ಮತ್ತು ಲಿಖಿತ ಸೂಚನೆ ನೀಡಲಾಗಿದೆ. ತಮಿಳುನಾಡಿನಿಂದ ಹಲವು ಖ್ಯಾತ ನಟರು, ಗಣ್ಯರು ಕೊಲ್ಲೂರಿಗೆ ಆಗಮಿಸುವುದು ಸಾಮಾನ್ಯವಾಗಿದ್ದು, ಇಳಯರಾಜ, ಶಿವಮಣಿ ಸೇರಿದಂತೆ ಹಲವು ಪ್ರಮುಖರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೂಡ ಕೊಲ್ಲೂರಿಗೆ ಭೇಟಿ ನೀಡಿದ್ದರು. ವಿಜಯ್ ಅವರ ಕುಟುಂಬದವರು ಹಿಂದೆಯೂ ಕ್ಷೇತ್ರಕ್ಕೆ ಆಗಮಿಸಿದ್ದರು. ಆದರೆ ಸಿಎಂ ಆದ ಬಳಿಕ ವಿಜಯ್ ಮೊದಲ ಬಾರಿಗೆ ಕೊಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ.
ವಿಜಯ್ ಅವರಿಗೆ ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಇತರ ಭಕ್ತರಂತೆ ಅವರು ದೇವಿಯ ದರ್ಶನ ಪಡೆಯಲಿದ್ದು, ಸರಕಾರಿ ಪ್ರೋಟೋಕಾಲ್ ಪ್ರಕಾರ ಪೂರ್ಣ ಕುಂಭ ಸ್ವಾಗತ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಶುಕ್ರವಾರ ನಡೆಯುವ ದೇವಿಯ ಉತ್ಸವ ಎಂದಿನ ಪೂಜಾ ಕ್ರಮದ ಭಾಗವಾಗಿದ್ದು, ವಿಜಯ್ ಆಗಮನಕ್ಕಾಗಿ ವಿಶೇಷವಾಗಿ ಆಯೋಜಿಸಿರುವುದಲ್ಲ. ಮಂಗಳಾರತಿ ಸಮಯದಲ್ಲಿ ಅವರು ಬಂದರೆ ಮಂಗಳಾರತಿ ವೀಕ್ಷಿಸಲು ಅವಕಾಶ ಸಿಗಲಿದೆ ಎಂದು ನಿತ್ಯಾನಂದ ಅಡಿಗ ಹೇಳಿದ್ದಾರೆ.

































