
ನವದೆಹಲಿ: ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಅದೇನೆಂದರೆ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವ ‘ಜನೌಷಧಿ’ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಹೆಸರಿನಲ್ಲಿ ಜೆನೆರಿಕ್ ಔಷಧಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಈ ಯೋಜನೆಗಾಗಿ 2026ರ ಮಾರ್ಚ್ 31ರ ಹೊತ್ತಿಗೆ 75 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದ್ದು ಪಶು ಆರೋಗ್ಯ ಮತ್ತು ರೋಗ ನಿಯಂತ್ರಣದ ಕಾರ್ಯಕ್ರಮ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಜನಗಣತಿಯ ಪ್ರಕಾರ 19.25 ಕೋಟಿ ಜಾನುವಾರುಗಳಿದ್ದು ಪಶುವೈದ್ಯಕೀಯ ಔಷಧಿಗಳು ಮತ್ತು ಮೇವು ಪೂರಕಕ್ಕೆ ಸುಮಾರು 6,000 ಕೋಟಿಗಳಷ್ಟು ಬಳಕೆ ಮಾಡಲಾಗುತ್ತಿದೆ. ಆದರೆ, ಪ್ರಸ್ತಾಪಿತ ನಿಧಿಯ ಹಂಚಿಕೆಯು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ. (LHDCP) ಯೋಜನೆಯ ‘ಪಶು ಔಷಧಿ’ ಘಟಕದ ಅಡಿಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲಾಗುವುದು. 2024-25 ಮತ್ತು 2025-26ನೇ ಸಾಲಿಗೆ LHDCP ಯೋಜನೆಗೆ ಒಟ್ಟು ಬಜೆಟ್ 3,880 ಕೋಟಿ ರೂ. ಮೀಸಲಿಡಲು ಸಂಪುಟ ನಿರ್ಧರಿಸಿದ್ದು ಪಶು ಔಷಧಿಯು ಜನೌಷಧಿ ಯೋಜನೆಯಂತೆಯೇ ಇರುತ್ತದೆ ಎಂದು ಮಾಹಿತಿ ನೀಡಿದರು.






















































