
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆ ಯಲ್ಲಿ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ “ಚಿಣ್ಣರ ಕಲರವ ” ಕಾರ್ಯಕ್ರಮವು ದಿನಾಂಕ 21.02.2026ರಂದು ಶಾಲಾ ಪ್ರಾಂಗಣದಲ್ಲಿ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರ್ವಾಶೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಸುನೀತಾ ಪೂಜಾರಿ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕೆರ್ವಾಶೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಯುತ ಶ್ರೀಹರಿ ಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಒಂದು ಪ್ರಮುಖ ವೇದಿಕೆಯಾಗಿದೆ ಎಂದರು. ಕಾರ್ಕಳದ ಜನಪ್ರಿಯ ಶಾಸಕರಾದ ವಿ. ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ 2024 -25 ನೇ ಸಾಲಿನ ದಾನಿಗಳ ನಾಮಫಲಕವನ್ನು ಅನಾವರಣ ಗೊಳಿಸಿದರು.
ಕೊಡು ಗೈ ದಾನಿ ನಿವೃತ್ತ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಕ್ಷಣದಲ್ಲಿ ಸಂಸ್ಕಾರ ಅತಿ ಅಗತ್ಯ ಎಂದರು. ಸ್ಥಳೀಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಸುನಿಲ್ ಶೆಟ್ಟಿ ಮಕ್ಕಳ ಹಸ್ತಪ್ರತಿ “ಅಕ್ಷರ ಚಿತ್ತಾರ”ವನ್ನು ಬಿಡುಗಡೆಗೊಳಿಸಿ ಮಕ್ಕಳ ಪ್ರತಿಭೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸ್ಥಳೀಯ ಜನಪ್ರತಿನಿಧಿಗಳಾದ ಧರ್ಮರಾಜ ಹೆಗ್ಡೆ, ಶ್ರೀಮತಿ ಪುಷ್ಪಾ ನಾಯ್ಕ್, ಶಾಲಾ ಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ನಾರಾಯಣ ಗುಡಿಗಾರ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸ್ವಾತಿ ವಿ.ನಾಯಕ್, ನಿವೃತ್ತ ಮುಖ್ಯ ಶಿಕ್ಷಕರಾದ ಸಂಜೀವ ದೇವಾಡಿಗ, ಶಾಲಾಭಿಮಾನಿಗಳಾದ ರಾಮಣ್ಣ ಸೇರ್ವೆಗಾರ್ , ಅಶೋಕ್ ಮೈಲಿ, ಲಕ್ಷ್ಮಣ ಪೂಜಾರಿ, ರಾಮರಾಯ ನಾಯಕ್, ಸಂಜೀವ ಗುಡಿಗಾರ್, ಶೇಖರ್ ಶೆಟ್ಟಿ, ನಾಗೇಶ್ ನಾಯಕ್, ಜಯರಾಮ್ ಬಂಗೇರ ಇವರು ಶಾಲಾ ಮಕ್ಕಳಿಗೆ ಹಾಗೂ ಪ್ರತಿಭಾವಂತ ಹಳೆ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ 2024 -25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಪ್ರಕೃತಿ ಗುಡಿಗಾರ್ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಸುನೀತಾ ನಾಯಕ್ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಅಶ್ವಿನಿ,ಶ್ರೀಮತಿ ಸೌಮ್ಯ, ಕುಮಾರಿ ಸುಪ್ರೀತಾ ಸಹಕರಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ನೃತ್ಯಾವಳಿಗಳು, ಕಿರು ನಾಟಕ ಪ್ರದರ್ಶನಗೊಂಡಿತು.



