
ಕುಜ ಹಾಗೂ ಕೇತು ಸಿಂಹ ರಾಶಿಯಲ್ಲಿ ಒಂದೇ ಡಿಗ್ರಿಯಲ್ಲಿ ಬರಲಿದ್ದಾರೆ. ಸಿಂಹ ರಾಶಿಯಲ್ಲಿ ಈ ಎರಡೂ ಗ್ರಹಗಳು ಒಗ್ಗೂಡಿ ಐವತ್ತೈದು ವರ್ಷಗಳಾಗಿರಬೇಕು. 1970ನೇ ಇಸವಿಯ ಸೆಪ್ಟೆಂಬರ್ ತಿಂಗಳಲ್ಲಿ ಈ ಎರಡು ಗ್ರಹಗಳು ರವಿ ಗ್ರಹದ ಆಧಿಪತ್ಯ ಇರುವಂಥ ಸಿಂಹ ರಾಶಿಯಲ್ಲಿ ಇದ್ದವು. ಹೀಗಿರುವಾಗ ಕುಜ ಗ್ರಹದ ಬೆಂಕಿಯನ್ನು ಕೇತು ಇನ್ನಷ್ಟು ಉದ್ದೀಪಿಸುತ್ತದೆ. ಆಕ್ರಮಣಕಾರಿ ಸ್ವಭಾವಕ್ಕೆ ಉತ್ತೇಜನ ದೊರೆತು, ಪರಿಣಾಮವನ್ನು ಆಲೋಚಿಸದೆ ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗುತ್ತಾರೆ. ಇದು ಹಿಂಸಾಚಾರಕ್ಕೆ ಪ್ರಚೋದನೆ ಸಿಗುವಂಥ ಸಮಯ ಆಗಿರುತ್ತದೆ. ಜುಲೈ ತಿಂಗಳ 24ರಿಂದ 30ನೇ ತಾರೀಕಿನ ಮಧ್ಯೆ ಹಿಂಸಾಚಾರ, ದಾಳಿ, ಪ್ರತಿದಾಳಿಗೆ ಪ್ರಚೋದನೆ, ಯುದ್ಧದ ಸನ್ನಿವೇಶ ಇವೆಲ್ಲಕ್ಕೂ ಸಾಕ್ಷಿ ಆಗುವ ಮುನ್ಸೂಚನೆ ಇದಾಗಿರುತ್ತದೆ.
ಯಾವಾಗ ಚಂದ್ರನ ಪ್ರಭಾವ ಈ ಕುಜ- ಕೇತು ಗ್ರಹ ಯುತಿಯ ಮೇಲೆ ಆಗುತ್ತದೋ ಆಗ ಆಕ್ರೋಶಕ್ಕೆ- ಆಕ್ರಮಣಕ್ಕೆ ದಿಕ್ಕು- ದೆಸೆ ಇಲ್ಲದಂತೆ ಹೊರಹಾಕುವ ಕ್ರಿಯೆ ನಡೆಯುತ್ತದೆ. ತಾವು ಮಾಡುವ ಕಾರ್ಯದ ನಂತರ ಏನಾಗಬಹುದು ಎಂಬ ವಿವೇಚನೆ ಇಲ್ಲದ ಕಾರಣಕ್ಕೆ ಆತಂಕದ ಸನ್ನಿವೇಶ ನಿರ್ಮಾಣವಾಗುತ್ತದೆ.
ಕುಜ ಗ್ರಹ ನೀಡುವಂಥ ಆಕ್ರಮಣಕಾರಿ ಆಲೋಚನೆಯನ್ನು ತಲೆಯಿಂದ ಚಿಂತಿಸದೆ ಏಕಾಏಕಿ ಮೇಲೆರಗುವ ಭಾವ ಉದ್ದೀಪನೆ ಆಗುತ್ತದೆ. ಕುಜನು ಶಕ್ತಿಯನ್ನು- ಸಾಮರ್ಥ್ಯವನ್ನು ನೀಡಿದರೆ, ಉದ್ದೇಶ- ಗುರಿಯೇ ಇಲ್ಲದೆ ಬಳಕೆ ಮಾಡುವಂತೆ ಕೇತು ಗ್ರಹ ಮಾಡುತ್ತದೆ. ಆದ್ದರಿಂದ ಭಾರತ- ಪಾಕಿಸ್ತಾನವೂ ಒಳಗೊಂಡಂತೆ ಯಾವ್ಯಾವ ದೇಶದ ಮಧ್ಯೆ ಭೂಮಿಗೆ ಸಂಬಂಧಿಸಿದ ವಿವಾದಗಳು ಇವೆಯೋ ಅವುಗಳ ಮಧ್ಯೆ ಕಾನೂನು ಸಂಘರ್ಷ ತೀವ್ರವಾಗುವ ಸಾಧ್ಯತೆ ಇದೆ.
ಇನ್ನು ಯುದ್ಧ ಸನ್ನಿವೇಶಕ್ಕೆ ಇನ್ನಷ್ಟು ಬೆಂಕಿ ಹಚ್ಚುವಂತೆ ಯುದ್ಧ ಸಾಮಗ್ರಿಗಳ ಪೂರೈಕೆ ಹೆಚ್ಚಾಗಲಿದ್ದು ತಮ್ಮ ಬತ್ತಳಿಕೆಯಲ್ಲಿ ಇನ್ನು ಯಾವುದೇ ಅಸ್ತ್ರಗಳಿಲ್ಲ ಎಂದು ಸುಮ್ಮನಾಗಬೇಕು ಎಂದುಕೊಳ್ಳುವ ದೇಶಕ್ಕೆ ಯುದ್ಧ ಸಾಮಗ್ರಿಗಳ ಪೂರೈಕೆ ಮಾಡಿ, ಯುದ್ಧ ಮುಂದುವರಿಸುವಂತೆ ಮಾಡಲಾಗುತ್ತದೆ.
ಯುದ್ಧ ಸೂಚಕ ಕುಜ ಹಾಗೂ ಅದನ್ನು ಉದ್ದೀಪಿಸುವ ಕೇತು ಈ ಎರಡೂ ರವಿಯ ಆಧಿಪತ್ಯದ ಸಿಂಹ ರಾಶಿಯಲ್ಲಿ ಒಟ್ಟಾಗುವುದರಿಂದ ಅಧಿಕಾರ ಹಾಗೂ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ದಾಳಿ- ಯುದ್ಧ- ಹಿಂಸಾಚಾರಗಳನ್ನು ಮಾಡುವುದಕ್ಕೆ ಮುಂದಾಗುವುದನ್ನು ಕಾಣಬಹುದು ಎಂದು ಪ್ರಕಾಶ್ ಅಮ್ಮಣ್ಣಾಯ( ಜ್ಯೋತಿಷಿ) ಕಾಪು ಅವರ ಲೇಖನದಲ್ಲಿ ವಿವರಿಸಲಾಗಿದೆ.

















