
ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರ್ಘಟನೆಯಿಂದಾಗಿ ಅಪಾರ ಸಾವು ನೋವು ಸಂಭವಿಸಿದ್ದು ಈಗಾಗಲೇ ರಾಜ್ಯ ಸರ್ಕಾರವು ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ತಲಾ 25 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್ಸಿಬಿ ‘ಜೂನ್ 4 2025, ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ, ನಮ್ಮ ಕುಟುಂಬ ಸದಸ್ಯರನ್ನು. ಅವರು ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರ ಜಾಗವನ್ನು ಯಾವ ಸಹಾಯವು ತುಂಬಲಾರದು, ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ ಆರ್ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ನೆರವನ್ನು ನೀಡಲಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ’ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದೆ.