
ಬೆಂಗಳೂರು: ಕೇಂದ್ರ ಸರ್ಕಾರದ ‘ಫ್ಲೆಕ್ಸಿ ಅವರ್’ ಪ್ರಸ್ತಾವನೆ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಮಿಕರ ಕೆಲಸದ ಅವಧಿಯನ್ನು ದಿನದಲ್ಲಿ 9 ರಿಂದ 10 ಗಂಟೆಗಳಿಗೆ ಹೆಚ್ಚಿಸುವ ಈ ಪ್ರಸ್ತಾವನೆ ಅಳವಡಿಕೆಗೆ ರಾಜ್ಯದ ಯಾವುದೇ ಕೈಗಾರಿಕಾ ಉದ್ಯಮಗಳು ತಮ್ಮ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಸಮ್ಮತಿಯೊಂದಿಗೆ ಮುಂದೆ ಬಂದರೆ ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರದ ‘ಫ್ಲೆಕ್ಸಿ ಅವರ್’ ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ ಕೈಗಾರಿಕೆಗಳು ಸಹಮತ ವ್ಯಕ್ತಪಡಿಸುತ್ತಿವೆ. ಹೀಗಾಗಿ ಸರ್ಕಾರದ ಸದ್ಯದ ನಿಲುವೇನೆಂದರೆ ನಾವು ಇದನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಹಾಗಂತ ಕಣ್ಣು ಮುಚ್ಚಿಕೊಂಡು ಎಲ್ಲಾ ಕೈಗಾರಿಕೆಗಳಲ್ಲೂ ಇದನ್ನು ಜಾರಿಗೊಳಿಸುವುದೂ ಇಲ್ಲ. ಬದಲಿಗೆ ಇದನ್ನು ಯಾವ ಕೈಗಾರಿಕೆಗಳಿಗೆ ಜಾರಿಗೊಳಿಸಬಹುದು. ಅದಕ್ಕೆ ಇರುವ ಷರತ್ತುಗಳು ಅನ್ವಯ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳುವ ಅಥವಾ ಬಿಡುವ ನಿರ್ಧಾರವನ್ನು ಆಯಾ ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳಿಗೆ ಬಿಡುತ್ತೇವೆ ಎಂದು ಹೇಳಿದರು.
ಸದ್ಯ ಪ್ರಸ್ತಾವನೆಯಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಒಪ್ಪಿಗೆ ಕಡ್ಡಾಯ ಎಂಬ ಷರತ್ತು ವಿಧಿಸಲಾಗಿದ್ದು ಹೀಗಾಗಿ ಯಾವುದೇ ಕಾರ್ಖಾನೆ, ಕೈಗಾರಿಕೆ ಉದ್ಯಮಗಳು ಮತ್ತು ತಮ್ಮ ಕಾರ್ಮಿಕರ ಸಂಘಟನೆ ಮತ್ತು ಕಾರ್ಮಿಕರ ಒಪ್ಪಿಗೆ ಪಡೆದು ಲಿಖಿತವಾಗಿ ತಮ್ಮಲ್ಲಿ ಫ್ಲೆಕ್ಸಿ ಅವರ ಕೆಲಸದ ವ್ಯವಸ್ಥೆ ಜಾರಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ನಮ್ಮ ಇಲಾಖೆಯ ಅಧಿಕಾರಿಗಳು ಮಾರ್ಗಸೂಚಿ ಪರಿಶೀಲಿಸಿ ಸಂಬಂಧಿಸಿದ ಎಲ್ಲರೊಂದಿಗೆ ಸಭೆ ನಡೆಸಲಿದ್ದಾರೆ. ಈ ರೀತಿ ಪ್ರಸ್ತಾವನೆ ಸಲ್ಲಿಸಿದ ಕೈಗಾರಿಕೆಗಳಿಗೆ ಈಗಾಗಲೇ ಅನುಮತಿ ನೀಡಿದ್ದೇವೆ ಎಂದು ಹೇಳಿದರು.





